*ತುಪ್ಪದ ಜಾತ್ರೆ – ಬೇಕಾದಷ್ಟು ತುಪ್ಪ, ಹೋಳಿಗೆ ಸವಿಯಬಹುದು*
ಬೀದರ್: ಸಾಲ ಮಾಡಿಯಾದ್ರು ತುಪ್ಪ ತಿನ್ನು ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಆದರೆ ನೀವು ಜಿಲ್ಲೆಯಲ್ಲಿ ನಡೆಯುವ ತುಪ್ಪದ ಜಾತ್ರೆಗೆ ಬಂದ್ರೆ ಸಾಲ ಮಾಡದೆ ನಿಮಗೆ ಬೇಕಾದಷ್ಟು ತುಪ್ಪ ತಿನ್ನಬಹುದು.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಖೇಡ್ ಗ್ರಾಮದಲ್ಲಿ ನಡೆಯುತ್ತಿರುವ ಪವಾಡ ಪುರುಷ ಶ್ರೀ ರೇವಪ್ಪಯ ಸ್ವಾಮಿಯ ಜಾತ್ರೆಯ ವಿಶೇಷತೆ ಇದು. ಈ ಜಾತ್ರೆಗೆ ಬಂದ ಭಕ್ತಾಧಿಗಳು ತಮಗೆ ಬೇಕಾದಷ್ಟು ತುಪ್ಪ ಹೋಳಿಗೆ ಸವಿಯಬಹುದಾಗಿದೆ. 20 ವರ್ಷಗಳಿಂದ ಈ ಜಾತ್ರೆ ಮಾಡಿಕೊಂಡು ಬರುತ್ತಿದ್ದು, ಪ್ರತಿ ವರ್ಷ ಜೇಷ್ಠಮಾಸದಲ್ಲಿ ಈ ಜಾತ್ರೆ ಮಾಡುತ್ತಾರೆ.
ಜೇಷ್ಠ ಮಾಸದಲ್ಲಿ ಈ ಜಾತ್ರೆ ಮಾಡಲು ಹಲವು ಕಾರಣಗಳು ಇವೆ. ಜೇಷ್ಠ ಮಾಸದಲ್ಲಿ ವಾತ, ಪಿತ್ತ, ಕಫಾ ಹೆಚ್ಚಾಗಿ ಬರುತ್ತವೆ. ಆದ್ದರಿಂದ ತುಪ್ಪ ಮತ್ತು ಹೋಳಿಗೆಯಲ್ಲಿರುವ ಬೆಲ್ಲ, ಬೇಳೆಯಲ್ಲಿ ಹಲವು ಔಷಧಿಯ ಗುಣಗಳು ಇವೆ. ಇದರಿಂದ ಈ ಪ್ರಸಾದ ಸವಿದರೆ ಎಲ್ಲಾ ರೋಗಗಳು ವಾಸಿಯಾಗುತ್ತವೆ ಎಂದು ರಾಜೇಶ್ವರ್ ಶಿವಚಾರ್ಯ ಸ್ವಾಮಿಗಳು ಹೇಳಿದ್ದಾರೆ.
ಪವಾಡ ಪುರುಷ ರೇವಪ್ಪಯ್ಯ ಸ್ವಾಮಿಯ ಜಾತ್ರೆಗೆ ಬರುವ ಭಕ್ತಾಧಿಗಳ ಪ್ರಸಾದಕ್ಕಾಗಿ 7 ಕ್ವಿಂಟಲ್ ಬೇಳೆ, 7 ಕ್ವಿಂಟಲ್ ಬೆಲ್ಲ, 14 ಕ್ವಿಂಟಲ್ ಅಕ್ಕಿ, 15 ಕೆಜಿಯ 45 ತುಪ್ಪದ ಡಬ್ಬಗಳು ಬಳಕೆ ಮಾಡುತ್ತಾರೆ. ಈ ಜಾತ್ರೆಯ ಮೊತ್ತೊಂದು ವಿಶೇಷತೆಯಂದರೆ ಪವಾಡ ಪುರುಷ ರೇವಪ್ಪಯ್ಯ ನೀರಿನಿಂದ ತುಪ್ಪ ಮಾಡಿದ್ದು, ಅದನ್ನೆ ಭಕ್ತಾಧಿಗಳಿಗೆ ಪ್ರಸಾದವಾಗಿ ನೀಡಲಾಗುತ್ತದೆ. ರೇವಪ್ಪಯ್ಯ ಸ್ವಾಮಿಗಳು ಹಲವು ವರ್ಷಗಳ ಕಾಲ ಈ ಸ್ಥಳದಲ್ಲಿ ತಪಸ್ಸು ಮಾಡಿ ಹಲವಾರು ಪವಾಡಗಳನ್ನು ಸೃಷ್ಠಿ ಮಾಡಿದ್ದಾರೆ.
ಶ್ರೀ ರೇವಪ್ಪಯ್ಯ ಸ್ವಾಮಿ ಜಾತ್ರೆ ನೋಡಲು ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ರಾಜ್ಯದ ವಿವಿದ ಮೂಲೆಗಳಿಂದ ಸಾವಿರಾರು ಜನ ಬರುತ್ತಾರೆ. ಈ ಪವಾಡ ಪುರುಷನ ಜಾತ್ರೆ ನೋಡಿ ಕಣ್ಣತುಂಬಿಕೊಳ್ಳುವುದು ಒಂದು ಕಡೆಯಾದರೆ, ಮೊತ್ತೊಂದು ಕಡೆ ತಮಗೆ ಇಷ್ಟವಾದ ಹೋಳಿಗೆ ತುಪ್ಪ ಸವಿದು ದೇವರ ಕೃಪೆಗೆ ಭಕ್ತರು ಪಾತ್ರರಾಗುತ್ತಾರೆ.