ಸಿದ್ದಾಪುರ: ಸ್ವರ್ಗ ಎಂದರೆ ಹೇಗಿರಬಹುದು ಎಂಬ ಕಲ್ಪನೆಯೂ ನಮಗಿಲ್ಲದಿರುವಾಗ ಗೋವುಗಳಿಗಾಗಿಯೇ ಸ್ವರ್ಗವನ್ನು ತಾಲ್ಲೂಕಿನ ಭಾನ್ಕುಳಿಮಠದಲ್ಲಿ ಧರೆಗಿಳಿಸಿದ್ದಾರೆ.
ಸತ್ತಮೇಲಿನ

ಸತ್ತಮೇಲಿನ ಸ್ವರ್ಗದ ಮಾತು ಹಾಗಿರಲಿ, ಗೋವುಗಳಿಗೆ ಬದುಕಿರುವಾಗಲೇ ಸ್ವರ್ಗ ಸದೃಶ ವಾತಾವರಣ ಇಲ್ಲಿ ಲಭ್ಯವಾಗಿದೆ. ಸ್ವರ್ಗದ ಸೊಬಗನ್ನು ಆಸ್ವಾದಿಸುವ ಸುವರ್ಣಾವಕಾಶ ಮನುಜರಿಗೆ ಬಂದೊದಗಿದೆ. ಇದಕ್ಕೆಲ್ಲ ಕಾರಣರಾದವರು ರಾಘವೇಶ್ವರಭಾರತಿ ಮಹಾಸ್ವಾಮಿಗಳವರು.
ಗೋಸ್ವರ್ಗದಲ್ಲಿ ಏನಿದೆ?: ಇಲ್ಲಿ ಗೋವುಗಳಿಗಿಲ್ಲ ಬಂಧನದ ಭೀತಿ. ಗೋವುಗಳನ್ನು ಕಟ್ಟಿಹಾಕುವ ವ್ಯವಸ್ಥೆಯೇ ಇಲ್ಲಿ ಇಲ್ಲ. ಅವುಗಳು ಸ್ವಚ್ಛಂದವಾಗಿ ವಿಹಾರ ಮಾಡುತ್ತಾ, ವಿರಾಮ ಪಡೆಯಬಹುದು.
ನೆರಳು, ಬಿಸಿಲು, ಮರದ ಆಶ್ರಯದ ಇಲ್ಲಿ ಗೋವುಗಳಿಗೆ ನೀಡಲಾಗಿದೆ. ಖಾಲಿಯೇ ಆಗದಂತೆ ನಿರಂತರ ಪರಿಶುದ್ಧ ನೀರು ಲಭ್ಯತೆ ಶಿಲಾಪಾತ್ರದಲ್ಲಿದೆ. ಎಷ್ಟು ದಿನ, ಎಷ್ಟು ಬೇಕಾದರೂ ನೀರನ್ನು ಗೋವುಗಳು ಇಲ್ಲಿ ಕುಡಿದು ದಣಿವಾರಿಸಿಕೊಳ್ಳುವಂತೆ ಮಾಡಲಾಗಿದೆ.

ಬೇಕೆನಿಸಿದಾಗ ಬೇಕೆನಿಸಿದಷ್ಟು ಬೇಕಾದ ಆಹಾರ ಇಲ್ಲಿ ಗೋವುಗಳ ಹಕ್ಕಾಗಿದೆ. ಮಧ್ಯಭಾಗದಲ್ಲೊಂದು ಗೋತೀರ್ಥ ಎಂಬ ಪುಷ್ಕರಿಣಿ, ಅದರ ಕೇಂದ್ರ ಗೋಸ್ವರ್ಗದ ಕೇಂದ್ರ ಬಿಂದು ಸಪ್ತಸನ್ನಿಧಿ ಎಂಬ ಏಳು ದೇವತೆಗಳ ಸಾನಿಧ್ಯ ಎಲ್ಲರನ್ನು ಗಮನ ಸೆಳೆಯುತ್ತದೆ.
ಗೋಪದ ಎಂಬ ನಾಲ್ಕು ದಿಕ್ಕಿನಲ್ಲಿ ನಾಲ್ಕು ವೇದಿಕೆಗಳು ಗೋವುಗಳ ಶ್ರವಣ, ದೃಶ್ಯ ಸುಖಕ್ಕಾಗಿ ಹಾಕಿಡಲಾಗಿದೆ. ವಯಸ್ಸಾದ, ಅಶಕ್ತ ಗೋವುಗಳಿಗಾಗಿಯೇ ಗುರುಕರುಣೆಯ ಫಲವಾದ ‘ಕರುಣಾವರಣ’! ಎಂಬ ವ್ಯವಸ್ಥೆ ಇಲ್ಲಿ ಮಾಡಲಾಗಿದೆ. ದಕ್ಷಿಣ ಭಾರತದಲ್ಲೇ ದುರ್ಲಭ ಎಂಬಂಥ ಶಸ್ತ್ರ ಚಿಕಿತ್ಸಾ ಘಟಕ ಸಹಿತ ಅತ್ಯಾಧುನಿಕ ಗೋವಿನ ಆಸ್ಪತ್ರೆ, ಗೋಪಾಲನೆಯ ಇತಿಹಾಸದಲ್ಲೇ ಎಲ್ಲೂ ಇಲ್ಲದ ಗೋವುಗಳ ಸುಖ ಪ್ರಸವಕ್ಕಾಗಿ ‘ಪ್ರಸವ ಶಾಲೆ’ ಇಲ್ಲಿದೆ.

ಯಾವ ಉದ್ಯಮಕ್ಕೂ ಕಡಿಮೆ ಇಲ್ಲದಂಥ ಗವ್ಯೋತ್ಪನ್ನ ತಯಾರಿಕೆಯ ‘ಗೋಫಲ’ ಎಂಬ ಉದ್ಯಮವು ಗೋವು ಲಕ್ಷ್ಮೀ ಎಂಬುದನ್ನು ನಿರೂಪಿಸುತ್ತದೆ. ಅಂತರಾಷ್ಟ್ರೀಯ ಮಟ್ಟದ ಗೋ-ಸಂಶೋಧನಾಲಯ ಇನ್ನೂ ಸದ್ಯದಲ್ಲೇ ಇಲ್ಲಿ ತಲೆ ಎತ್ತಲಿದೆ. ಇನ್ನೂ ಹತ್ತು ಹಲವು ಪ್ರಥಮಗಳು ಭಾರತದ ಶ್ರೇಷ್ಠ ಗೋಧಾಮವಾದ ಗೋಸ್ವರ್ಗದಲ್ಲಿ ಪ್ರತಿದಿನವೂ ನಡೆಯುತ್ತಿದೆ.
ಇಷ್ಟೆಲ್ಲ ವಿಶೇಷಾತಿವಿಶೇಷಗಳು ನಮ್ಮ ಕಾಲಮಾನದಲ್ಲಿ ನಿರ್ಮಿತವಾಗುತ್ತಿರುವುದು ನಮ್ಮ ಸುಯೋಗವಲ್ಲದೇ ಮತ್ತೇನು?? ಇದಕ್ಕೆಲ್ಲ ಕಲಶಪ್ರಾಯವಾಗಿ ರಾಘವೇಶ್ವರಭಾರತಿ ಮಹಾಸ್ವಾಮಿಗಳವರು ತಮ್ಮ ೨೫ನೇ ಚಾತುರ್ಮಾಸ್ಯವನ್ನೂ ಗೋಸ್ವರ್ಗದಲ್ಲೇ ಆಚರಿಸಿ ಅನುಗ್ರಹಿಸಲಿದ್ದಾರೆ.
ನೀವೂ ಕೈಜೋಡಿಸಿ: ನಮ್ಮ ಜೀವಿತಾವಧಿಯ ಅದ್ಭುತ ದಿವ್ಯತೆಯ ಈ ಮಹಾಕಾರ್ಯಕ್ಕೆ ನಾವೂ ಕೈಜೋಡಿಸಿದರೆ ನಮ್ಮ ಜೀವನವೂ ಧನ್ಯ. ಸಾಮಾನ್ಯರಲ್ಲಿ ಸಾಮಾನ್ಯರೂ ಪಾಲ್ಗೊಳ್ಳಬಹುದಾದ ಸೇವಾ ಸಮರ್ಪಣೆಗಳು ಇಲ್ಲಿವೆ.

ಏಕಪದ: ಒಬ್ಬ ವ್ಯಕ್ತಿ ದಿನಕ್ಕೆ ಒಂದು ರೂಪಾಯಿಯಂತೆ ವರ್ಷಪೂರ್ತಿ ಸಮರ್ಪಿಸಿದರೆ ಗೋಸ್ವರ್ಗದ ಒಂದು ಚದರ ಅಡಿಯ ಸೇವೆ ಅವರ ಹೆಸರಲ್ಲಿ ಮಾಡಲಾಗುತ್ತದೆ.
ಸಾವಿರದ ಸುರಭಿ: ಗೋಸ್ವರ್ಗದಲ್ಲಿ ವಾಸಿಸುವ ಸಾವಿರ ಗೋವುಗಳಿಗೂ ನಿಮ್ಮ ಕಿಂಚಿತ್ತಾದರೂ ಸೇವೆ ಸಲ್ಲಬೇಕು ಎಂತಾದಲ್ಲಿ ಒಂದು ಸಾವಿರ ರೂಪಾಯಿಗಳನ್ನು ಸಮರ್ಪಿಸಿ ಸಾವಿರದ ಸುರಭಿ ಸೇವಕರಾಗಬಹುದು.
ವಿಶ್ವದ ಅದ್ಭುತವೊಂದರ ನಿರ್ಮಾಣದಲ್ಲಿ ನಮ್ಮ ಕಿಂಚಿತ್ ಸೇವೆಯೂ ಇರಲಿ, ಬನ್ನಿ ಸೇವೆಗೈದು ಕೃತಾರ್ಥರಾಗೋಣ.

ಬನ್ನಿ, ಗೋಸ್ವರ್ಗ ನಿಮ್ಮನ್ನು ಆತ್ಮೀಯವಾಗಿ ಆಮಂತ್ರಿಸುತ್ತಿದೆ. ಗೋವುಗಳು ಉತ್ಕೃಷ್ಟ ವಾತಾವರಣದಲ್ಲಿ ಆನಂದಿಸುತ್ತಿರುವುದನ್ನ ನೋಡಬನ್ನಿ ಒಮ್ಮೆ.