*ಮದುವೆಯಾದ 9 ದಿನದಲ್ಲೇ ನವ ವಿವಾಹಿತೆ ಕಾಣೆ: ಅಪಹರಣ ಶಂಕೆ*
ಅಂಕೋಲಾ: 9 ದಿನದ ಹಿಂದೆ ವಿವಾಹವಾಗಿದ್ದ ನವ ವಿವಾಹಿತೆಯೊಬ್ಬಳನ್ನು ಗದಗ ಮೂಲದ ವ್ಯಕ್ತಿಯೊಬ್ಬ ಅಪಹರಿಸಿರುವ ಕುರಿತು ಅಪಹರಣಕ್ಕೊಳಗಾದ ವಿವಾಹಿತಳ ಪತಿ ಇಲ್ಲಿನ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾರವಾರ ತಾಲ್ಲೂಕಿನ ಬಾಡದ ನಿವಾಸಿ ಸಚಿನ್ ನಾಯ್ಕ ಎಂಬುವವರು ಜೂನ್ 28ರಂದು ಅಂಕೋಲಾ ತಾಲ್ಲೂಕಿನ ಅವರ್ಸಾದ ದಿವ್ಯಾ ನಾಯ್ಕ ಎಂಬ ಯುವತಿಯನ್ನು ವಿವಾಹವಾಗಿದ್ದರು. ವಿವಾಹದ ಬಳಿಕ ಅನ್ಯೋನ್ಯವಾಗಿದ್ದ ಈ ದಂಪತಿ ಜುಲೈ 2 ಮತ್ತು 3ಕ್ಕೆ ಗ್ರಾಮ ದೇವರು, ಕುಲ ದೇವರಿಗೆ ಪೂಜೆ ಸಲ್ಲಿಸಿ ಬಂದಿದ್ದರು.
ಅದರ ಬಳಿಕ ಜುಲೈ 4ರಂದು ದಿವ್ಯಾಳ ತವರು ಮನೆಗೆ ನೆಂಟರ ಊಟಕ್ಕೆಂದು ತೆರಳಿದ್ದ ದಂಪತಿಗೆ, ಸಂಪ್ರದಾಯದಂತೆ ನವ ವಧು ಐದು ದಿನ ತವರು ಮನೆಯಲ್ಲೇ ಇರಬೇಕೆಂದು ದಿವ್ಯಾಳ ಕುಟುಂಬದವರು ತಿಳಿಸಿದ್ದಾರೆ. ಅದರಂತೆ ದಿವ್ಯಾಳನ್ನು ತವರು ಮನೆಯಲ್ಲೇ ಬಿಟ್ಟು ಸಚಿನ್ ಮನೆಗೆ ವಾಪಾಸಾಗಿದ್ದಾನೆ.
ಅದರ ನಂತರ ಜುಲೈ 6ರ ಬೆಳಿಗ್ಗಿನವರೆಗೂ ಕರೆ ಮಾಡಿ ಮಾತನಾಡಿದ ದಿವ್ಯಾ 6ರ ಸಂಜೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದಾಳೆ. ಬಟ್ಟೆ ಹೊಲಿಯಲು ಕೊಟ್ಟು ಬರುವುದಾಗಿ ತವರು ಮನೆಯಿಂದ ಹೊರಟ ದಿವ್ಯಾ ಈವರೆಗೂ ವಾಪಾಸಾಗಿಲ್ಲ. ಆದರೆ, ಜುಲೈ 7ರಂದು ಗದಗ ಮೂಲದ ದಿಲನ್ ಎಂಬುವವನು ಸಚಿನ್ ಗೆ ಕರೆಮಾಡಿ, ದಿವ್ಯಾಳನ್ನು ಅಪಹರಿಸಿರುವುದಾಗಿ ಹಾಗೂ ಆಕೆಯನ್ನು ಹುಡುಕಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಒಡ್ಡಿದ್ದಾನೆ.
ಇದರಿಂದಾಗಿ ಭಯಭೀತರಾಗಿರುವ ಸಚಿನ್ ಕುಟುಂಬ ದಿವ್ಯಾಳನ್ನು ಹುಡುಕಿಕೊಡುವಂತೆ ದೂರು ದಾಖಲಿಸಿದ್ದಾರೆ. ಅವಳ ಮೈಮೇಲೆ ಒಡವೆಗಳಿದ್ದು, ಅವುಗಳಿಗಾಗಿ ಅಥವಾ ಇನ್ಯಾವುದೇ ಕಾರಣಕ್ಕೆ ಆಕೆಯನ್ನು ಅಪಹರಿಸಿರಬಹುದು ಎಂದು ಸಚಿನ್ ಅಭಿಪ್ರಾಯಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿದಿದ್ದಾರೆ