*ಶೃಂಗೇರಿ ಮಠಕ್ಕೆ 15 ಕೋಟಿ ಬ್ಲಾಕ್ಮೇಲ್!*
*ಬೆಂಗಳೂರು ಶೃಂಗೇರಿ ಶಿವಗಂಗಾ ಮಠಕ್ಕೆ ಸೇರಿದ್ದ ನೂರಾರು ಕೋಟಿ ರು. ಬೆಲೆಬಾಳುವ ಆಸ್ತಿ ದಾಖಲೆಗಳನ್ನು ಇಟ್ಟುಕೊಂಡು 15 ಕೋಟಿ ರು.ಗಳಿಗಾಗಿ ಬ್ಲಾಕ್ಮೇಲ್ ಮಾಡುತ್ತಿದ್ದ ಮಠದ ಮಾಜಿ ಆಡಳಿತಾಧಿಕಾರಿ ಸೇರಿದಂತೆ ನಾಲ್ವರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು : ಶೃಂಗೇರಿ ಶಿವಗಂಗಾ ಮಠಕ್ಕೆ ಸೇರಿದ್ದ ನೂರಾರು ಕೋಟಿ ರು. ಬೆಲೆಬಾಳುವ ಆಸ್ತಿ ದಾಖಲೆಗಳನ್ನು ಇಟ್ಟುಕೊಂಡು 15 ಕೋಟಿ ರು.ಗಳಿಗಾಗಿ ಬ್ಲಾಕ್ಮೇಲ್ ಮಾಡುತ್ತಿದ್ದ ಮಠದ ಮಾಜಿ ಆಡಳಿತಾಧಿಕಾರಿ ಸೇರಿದಂತೆ ನಾಲ್ವರನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಮಠದ ಮಾಜಿ ಆಡಳಿತಾಧಿಕಾರಿ ಗಿರಿನಗರ ನಿವಾಸಿ ಎನ್.ಎಲ್.ನರಸಿಂಹಯ್ಯ, ಮಹೇಶ್ ಶರ್ಮ, ಟಿ.ಆರ್.ಆನಂದ್ ಮತ್ತು ಕೃಷ್ಣ ಬಂಧಿತರು. ಮತ್ತೊಬ್ಬ ಆರೋಪಿ ಮೃತ್ಯುಂಜಯ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿರುವ ದಾಖಲೆಗಳು ಸಾವಿರ ಕೋಟಿಗೂ ಹೆಚ್ಚು ಮೌಲ್ಯದ್ದಾಗಿದೆ. ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗುವುದು ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿವಗಂಗೆಯಲ್ಲಿರುವ ಮಠಕ್ಕೆ ಮೈಸೂರು ಅರಸರು ಆ ಕಾಲದಲ್ಲಿ ಬೆಂಗಳೂರು ಸುತ್ತಮುತ್ತಲಿನ ಪ್ರದೇಶದಲ್ಲಿ ನೂರಾರು ಎಕರೆ ಜಮೀನು ದೇಣಿಗೆಯಾಗಿ ನೀಡಿದ್ದರು. ಸಚ್ಚಿದಾನಂದ ಭಾರತಿ ಸ್ವಾಮೀಜಿ ಪೀಠಾಧಿಪತಿಯಾಗಿದ್ದ ಅವಧಿಯಲ್ಲಿ ಮಠಕ್ಕೆ ಆರ್ಥಿಕ ಸಂಕಷ್ಟಎದುರಾಗಿತ್ತು. 1960ರಲ್ಲಿ ಸ್ವಾಮೀಜಿ ಅಂದಿನ ಮೈಸೂರು ಸರ್ಕಾರಕ್ಕೆ ಪತ್ರ ಬರೆದು, ದೇವನಹಳ್ಳಿ ತಾಲೂಕು ಜೋಡಿ ಲಕ್ಷ್ಮೇಪುರ ಗ್ರಾಮದ ಸರ್ವೇ ನಂಬರ್ 2ರಿಂದ 9,11,38 ಮತ್ತು 56ರಲ್ಲಿನ 208 ಎಕರೆ ಜಮೀನು ಮಾರಾಟ ಮಾಡಿಕೊಡುವಂತೆ ಮನವಿ ಮಾಡಿದ್ದರು. ಅದರಂತೆ ಸರ್ಕಾರ 1965ರಲ್ಲಿ ಮಠಕ್ಕೆ ಸೇರಿದ 208 ಎಕರೆ ಜಮೀನನ್ನು ಏರ್ಪೋರ್ಸ್ ಎಂಪ್ಲಾಯೀಸ್ ಅಸೋಸಿಯೇಷನ್ಗೆ 40,200 ರು.ಗೆ ಮಾರಾಟ ಮಾಡಿ ಬಂದ ಹಣವನ್ನು ಮಠಕ್ಕೆ ನೀಡಿತ್ತು. ಈ ಪೈಕಿ ಮಠ 40 ಸಾವಿರ ರು.ಗಳನ್ನು ಬ್ಯಾಂಕ್ನಲ್ಲಿ ನಿಶ್ಚಿತ ಠೇವಣಿ ಇಟ್ಟು, 200 ರು. ಹಣವನ್ನು ಮಠದ ಖರ್ಚಿಗೆ ಪಡೆದಿತ್ತು.
ಅಂದಿನ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅನಾರೋಗ್ಯಕ್ಕೆ ತುತ್ತಾಗಿದ್ದರಿಂದ ಮಠದ ಕಾರ್ಯ ನಿರ್ವಹಣೆ ಕಷ್ಟವಾಗಿತ್ತು. ಹೀಗಾಗಿ ಮಠದ ಆಡಳಿತಾಧಿಕಾರಿಯಾಗಿದ್ದ ನರಸಿಂಹಯ್ಯನಿಗೆ ಸ್ವಾಮೀಜಿ ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಮಾಡಿ ಸಂಪೂರ್ಣ ಅಧಿಕಾರ ನೀಡಿದ್ದರು. ಇದನ್ನ ದುರುಪಯೋಗ ಪಡಿಸಿಕೊಂಡ ನರಸಿಂಹಯ್ಯ, ಲಕ್ಷ್ಮೇಪುರದಲ್ಲಿರುವ ಜಮೀನು ಮಠಕ್ಕೆ ಸೇರಿದ್ದು ಎಂದು ಅಕ್ರಮವಾಗಿ ಕೋರ್ಟ್ ಮೆಟ್ಟಿಲೇರಿದ್ದರು. ಇದರಿಂದ ಆತಂಕಕ್ಕೆ ಒಳಗಾದ ಏರ್ಪೋರ್ಸ್ ಎಂಪ್ಲಾಯೀಸ್ ಅಸೋಸಿಯೇಷನ್ ಪದಾಧಿಕಾರಿಗಳು ಈಗಿನ ಮಠದ ಸ್ವಾಮೀಜಿಯ ಮೊರೆ ಹೋಗಿದ್ದರು. ಇದನ್ನು ಪರಿಶೀಲನೆ ನಡೆಸಿದ ಸ್ವಾಮೀಜಿ ಒಮ್ಮೆ ಜಮೀನು ಮಾರಾಟ ಮಾಡಿದ ಮೇಲೆ ಅದು ಏರ್ಪೋರ್ಸ್ ಎಂಪ್ಲಾಯೀಸ್ ಅಸೋಸಿಯೇಷನ್ ಅವರಿಗೆ ಸೇರಿದ ಸ್ವತ್ತಾಗಿದ್ದು, ಮಠಕ್ಕೆ ಸೇರಿದ್ದಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಇದರಿಂದ ಸಂತಸಗೊಂಡ ಅಸೋಸಿಯೇಷನ್ ವತಿಯಿಂದ ಮಠಕ್ಕೆ ಕಳೆದ ಜನವರಿಯಲ್ಲಿ 20 ಕೋಟಿ ರು. ದಾನವಾಗಿ ಕೊಡಲಾಗಿತ್ತು.
15 ಕೋಟಿಗೆ ಡಿಮ್ಯಾಂಡ್: ತಾನು ದಾವೆ ಹೂಡಿದ ಹಿನ್ನೆಲೆಯಲ್ಲಿ ಮಠಕ್ಕೆ ಇಷ್ಟುಮೊತ್ತದ ದೇಣಿಗೆ ಬಂದಿದೆ. 20 ಕೋಟಿ ರು.ಗಳ ಪೈಕಿ 15 ಕೋಟಿ ರು. ತನಗೆ ಕೊಡಬೇಕೆಂದು ನರಸಿಂಹಯ್ಯ ಒತ್ತಾಯ ಮಾಡಿದ್ದ. ಇದಕ್ಕೆ ಮಠ ಒಪ್ಪದ್ದಿದ್ದಾಗ ಮಠಕ್ಕೆ ಸೇರಿದ ಎಲ್ಲ ದಾಖಲೆಗಳೂ ನನ್ನ ಬಳಿ ಇವೆ. ನಾನು ಕೇಳಿದ ಹಣ ನೀಡಿದರೆ ಮಾತ್ರ ದಾಖಲೆ ಕೊಡುವುದಾಗಿ ಬ್ಲಾಕ್ಮೇಲ್ ಮಾಡುತ್ತಿದ್ದ. ಈ ಸಂಬಂಧ ಈಗಿನ ಆಡಳಿತಾಧಿಕಾರಿ ಶ್ರೀನಿವಾಸ್ ರಾವ್ ವಿಧಾನಸೌಧ ಠಾಣೆಗೆ ದೂರು ನೀಡಿದ್ದರು. ಪ್ರಕರಣ ಸಿಸಿಬಿಗೆ ವರ್ಗಾವಣೆಗೊಂಡಿತ್ತು. ಕಾರ್ಯಾಚರಣೆ ನಡೆಸಿದ ಸಿಸಿಬಿ ವೆಂಕಟೇಶ್ ಪ್ರಸನ್ನ ನೇತೃತ್ವದ ತಂಡ ಮಠದ ಆಡಳಿತಾಧಿಕಾರಿ ಶ್ರೀನಿವಾಸ್ ರಾವ್ ಮೂಲಕ ರಾಜೀ ಸಂಧಾನ ನೆಪದಲ್ಲಿ ಆರೋಪಿಗಳನ್ನು ಕರೆಸಿಕೊಂಡು ಬಂಧಿಸಿದೆ. ಈ ವೇಳೆ ಆರೋಪಿ ಬಳಿ ಇದ್ದ ಮಠಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
*ಮಠ, ಅಧಿಕಾರಿಗಳ ಮೇಲೆ ಪ್ರಭಾವ:*
ನರಸಿಂಹಯ್ಯನ ಹಿಂದಿರುವ ಕಾಣದ ಕೈಗಳು ಸಾವಿರಾರು ಕೋಟಿ ಬೆಲೆಬಾಳುವ ಜಮೀನು ಕಬಳಿಸಲು ಯತ್ನಿಸಿದ್ದವು. ನರಸಿಂಹಯ್ಯ ಬಂಧನದ ಬಳಿಕ ಮಠ ಹಾಗೂ ತನಿಖೆ ನಡೆಸುತ್ತಿರುವ ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ಮುಂದಾಗಿವೆ. ಪ್ರಕರಣದ ಕೂಲಂಕಷ ತನಿಖೆಯಾಗಬೇಕು ಎಂದು ಹೆಸರು ಹೇಳಲು ಇಚ್ಛಿಸದ ಮಠದ ವ್ಯಕ್ತಿಯೊಬ್ಬರು ‘ ತಿಳಿಸಿದರು.
ಬಂಧಿತರ ಪೈಕಿ ಎಲ್ಲರೂ 45ರಿಂದ 55 ವರ್ಷದವರಾಗಿದ್ದಾರೆ. ತಲೆ ಮರೆಸಿಕೊಂಡಿರುವ ಮೃತ್ಯುಂಜಯ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾನೆ. ಉಳಿದವರು ಸಣ್ಣಪುಟ್ಟಕೆಲಸ ಮಾಡಿಕೊಂಡಿದ್ದರು. ಹಣದ ಆಸೆಗಾಗಿ ನರಸಿಂಹಯ್ಯ ಹೇಳಿದಂತೆ ಇತರ ಆರೋಪಿಗಳು ಕೇಳುತ್ತಿದ್ದರು ಎಂದು ಸಿಸಿಬಿ ಮೂಲಗಳು ತಿಳಿಸಿವೆ.
*ನಿಶ್ಚಿತ ಠೇವಣಿ ದಾಖಲೆ ಸಹ ಕದ್ದಿದ್ದ*
ಬಂಧಿತ ಆರೋಪಿ ನರಸಿಂಹಯ್ಯ ಸುಮಾರು 30 ವರ್ಷಗಳ ಕಾಲ ಮಠದ ಆಡಳಿತಾಧಿಕಾರಿಯಾಗಿ ಕೆಲಸ ಮಾಡಿದ್ದ. 1965ರಲ್ಲಿ ಜಮೀನು ಮಾರಾಟದ ಹಣವನ್ನು ಬ್ಯಾಂಕ್ವೊಂದರಲ್ಲಿ ಇಡಲಾಗಿದ್ದ ನಿಶ್ಚಿತ ಠೇವಣಿಯ ದಾಖಲೆಯನ್ನು ಸಹ ಕದ್ದಿದ್ದ. ಅದನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು.