ರುದ್ರಭೂಮಿಗೆ ಹಳ್ಳದಲ್ಲೇ ಶವ ಕೊಂಡೊಯ್ದ ಸ್ಥಳೀಯರು

ಅಂಕೋಲಾ : ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಮಳೆಯಿಂದಾಗಿ ಕುಸಿದಿದ್ದರಿಂದ ವೃದ್ಧೆಯೋರ್ವಳ ಮೃತದೇಹವನ್ನು ಹರಿಯುವ ಹಳ್ಳದಲ್ಲೇ ಸಾಹಸದೊಂದಿಗೆ ಕೊಂಡೊಯ್ದು ಅಂತ್ಯ ಸಂಸ್ಕಾರ ನಡೆಸಿದ ಶೋಚನೀಯ ಘಟನೆ ತಾಲೂಕಿನ ಕೇಣಿ ಗ್ರಾಮದಲ್ಲಿ ಇಂದು ನಡೆದಿದೆ.
ಕೇಣಿ ಗ್ರಾಮದ ವೃದ್ಧೆ ಸುಶೀಲಾ ಗಾಂವ್್ಕರ (೮೦) ಇಂದು ಮೃತಪಟ್ಟಿದ್ದರು. ಆದರೆ, ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಕೇಣಿ ಹಳ್ಳ ತುಂಬಿ ಹರಿದು ರುಧ್ರಭೂಮಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕುಸಿದು ಬಿದ್ದಿತ್ತು.

ಇದರಿಂದಾಗಿ ಶವವವನ್ನು ಸ್ಮಶಾನಕ್ಕೆ ಸಾಗಿಸಲು ದೋಣಿ ತರಲು ಚರ್ಚಿಸಿದರು. ಆದರೆ ಅದು ಕೈಗೂಡಿಲ್ಲ. ಕೊನೆಗೆ ಸ್ಥಳೀಯ ಎಂಟತ್ತು ಮಂದಿಯೇ ಕೇಣಿಯ ಹಳ್ಳದ ನೀರಿಗಿಳಿದು ಎದೆಯೆತ್ತರಕ್ಕೆ ಹರಿಯುತ್ತಿರುವ ಹಳ್ಳದಲ್ಲೇ ಮೃತದೇಹವನ್ನು ಹೊತ್ತು ಸಾಗಿಸಿದರು. ಬಳಿಕ ಹಳ್ಳದ ಇನ್ನೊಂದು ಬದಿಯಲ್ಲಿದ್ದ ರುಧ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಿ ಮತ್ತೆ ಅದೇ ಹಳ್ಳದ ನೀರನ್ನು ದಾಟಿದ್ದಾರೆ.
ಸೇತುವೆಯನ್ನು ವರ್ಷದ ಹಿಂದೆ ಕಟ್ಟಲಾಗಿತ್ತು ಎನ್ನಲಾಗಿದೆ. ಕಳಪೆ ಕಾಮಗಾರಿಯಿಂದಾಗಿ ಸೇತುವೆ ಕುಸಿದಿದೆ ಎಂಬ ಆರೋಪ ಕೇಳಿ ಬಂದಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.