🙏ಶ್ರೀ ಗುರುಭ್ಯೋ ನಮಃ🙏
ಇಂದಿನಿಂದ(ಜುಲೈ 14)ರಿಂದ ಆಷಾಢ ಮಾಸ ಆರಂಭ*
ಆಷಾಢವೆಂದರೆ ವಿರಹಿಗಳ ಮಾಸವಲ್ಲ, ಭಕ್ತಿಯ ಸದವಕಾಶ.
ಅಷಾಢವಿದು ಶೂನ್ಯಮಾಸ ಎನ್ನುವ ವರಸೆ ಕೆಲವರದಾದ್ದಾರೆ ಜನಪದರ ಮಟ್ಟಿಗೆ ಇದುವೇ ಸಂಭ್ರಮದ ಮಾಸ. ಆಧ್ಯಾತ್ಮ ಸಾಧಕರಿಗೆ ಅದುವೇ ಸಾಧನೆಯ ಪರ್ವ. ರೈತಾಪಿ ಜನರು ಮುಂದಿನ ನಾಲ್ಕು ತಿಂಗಳ ಕೃಷಿ ಚಟುವಟಿಕೆಗೆ ಸಿದ್ಧತೆಗಳನ್ನು ನಡೆಸಿದರೆ, ಆಧ್ಯಾತ್ಮ ಸಾಧಕರು ಆಂತರಿಕ ಶಕ್ತಿಯ ಸಂವರ್ಧನೆಗೆ ಮುಂದಡಿ ಇಡುತ್ತಾರೆ. ಲೌಕಿಕ, ಆಧ್ಯಾತ್ಮಿಕ ಕಾರ್ಯಗಳಿಗೆ ಅದುವೇ ಮುನ್ನುಡಿಯಾಗುತ್ತದೆ.
ಅಷಾಢಮಾಸ ಎಂದರೆ ಶುಭಕಾರ್ಯಗಳಿಗೆ ನಿಷಿದ್ಧ ಕಾಲ ಎಂಬುದು ಹಿಂದುಧರ್ಮೀಯರ ನಂಬಿಕೆಗಳಲ್ಲೊಂದು. ಆದರೆ ಈ ಮಾಸದಲ್ಲೇ ಹಲವು ಆಚರಣೆಗಳು, ವ್ರತಗಳು ನಡೆಯುತ್ತವೆ. ಆಷಾಢದಲ್ಲಿ ಮಂಗಳಕಾರ್ಯಗಳನ್ನು ಆಚರಿಸಲು ನಿಷೇಧವಿದ್ದರೂ ವೈಯುಕ್ತಿಕ ಜಪ, ಅನುಷ್ಠಾನ, ಸಾಧನೆಗಳಿಗೆ ಪ್ರಶಸ್ತ ಕಾಲವೂ ಹೌದು. ಆಷಾಢ ಆರಂಭವಾಗುವ ಪ್ರಸ್ತುತ ಸಂದರ್ಭದಲ್ಲಿ ಈ ಮಾಸದ ಪರಿಚಯಾತ್ಮಕ ಬರಹವಿದು.
ಜೇಷ್ಠಮಾಸದ ಅಮಾವಾಸ್ಯೆಯ ಮರುದಿನ ಅಂದರೆ ಪಾಡ್ಯದಿಂದ ಅಷಾಢಮಾಸ ಆರಂಭವಾಗುತ್ತದೆ. ಸೂರ್ಯ ಮಿಥುನರಾಶಿಯಲ್ಲಿರುವಾಗ ಪ್ರಾರಂಭವಾಗುವ ಅಷಾಢಮಾಸವು ಕರ್ಕಾಟಕರಾಶಿಯಲ್ಲಿರುವಾಗ ಮುಗಿಯುತ್ತದೆ. ಕರ್ಕಾಟಕರಾಶಿಯಲ್ಲಿ ಸೂರ್ಯನಿರುವ ಈ ಮಾಸದ ಕಾಲವು ಶೂನ್ಯ ಮಾಸವೆಂದು ಪರಿಗಣಿಸಲ್ಪಡುತ್ತದೆ. ಅಷಾಢಮಾಸದ ಹುಣ್ಣಿಮೆಯಂದು ಪೂರ್ವಾಷಾಢ ಅಥವಾ ಉತ್ತಾರಾಷಾಢ ನಕ್ಷತ್ರ ಬರುವುದರಿಂದ ಮಾಸವು ಆಷಾಢ ಎಂಬ ಹೆಸರನ್ನು ಪಡೆದಿದೆ. ಕರಾವಳಿಯ ಕೆಲಚೆಡೆಗಳಲ್ಲಿ, ಅಷಾಢಮಾಸಕ್ಕೆ ‘ಆಡಿ’ ಎನ್ನುತ್ತಾರೆ. ‘ಚಕ್ರಿ’ ಎನಿಸಿಕೊಂಡ ಮಹಾವಿಷ್ಣುವೇ ಈ ಮಾಸದ ಅಧಿಪತಿಯಾಗಿರುವವನು.
ಪ್ರಾಚೀನಕಾಲದಿಂದಲೂ ಅಷಾಢಮಾ¸ವು ಅಶುಭ ಎನ್ನುವ ನಂಬಿಕೆಯಿದೆ. ಅಷಾಢಮಾಸವು ಪ್ರಾರಂಭವಾಗಿ ಮುಗಿಯುವ ತನಕವೂ ಉಪನಯನ, ಗೃಹಪ್ರವೇಶ, ವಾಹನ ಹಾಗೂ ಜಮೀನು ಕೊಳ್ಳುವುದು, ಹೊಸ ವ್ಯಾಪಾರ ಆರಂಭಿಸುವುದು, ಮದುವೆ ಹಾಗೂ ಮದುವೆಯ ಮಾತುಕತೆಗಳೇ ಮುಂತಾದ ಶುಭಕಾರ್ಯಗಳನ್ನು ಆಚರಿಸುವುದಿಲ್ಲ. ಅದಕ್ಕೆ ನಾನಾ ಬಗೆಯ ಕಾರಣಗಳುಂಟು. ಈ ಮಾಸದ ಆರಂಭದಿಂದ ದೇವತೆಗಳಿಗೆ ಕತ್ತಲೆ ಪ್ರಾರಂಭವಾಗುತ್ತದೆ. ಆ ಸಮಯದಲ್ಲಿ ಅವರೆಲ್ಲ ಯೋಗನಿದ್ರೆಯಲ್ಲಿರುವ ಕಾರಣದಿಂದ ಶುಭಕಾರ್ಯಗಳಿಗೆ ಅವರ ಪೂರ್ಣಾನುಗ್ರಹ ಲಭಿಸುವುದಿಲ್ಲ. ಹೀಗಾಗಿ ಈ ಮಾಸದಲ್ಲಿ ಕೈಗೊಳ್ಳುವ ಯಾವುದೇ ಮಂಗಳಕಾರ್ಯಗಳಿಗೂ ಬಲವಿರುವುದಿಲ್ಲ ಮತ್ತು ಸಫಲವಾಗುವುದಿಲ್ಲ ಎನ್ನುವುದು ಹಿಂದಿನಿಂದಲೂ ಬಂದ ನಂಬಿಕೆ. ಆದರೆ ಜಪಾನುಷ್ಠಾನಗಳ ಮುಖಾಂತರ ದೇವರನ್ನು ಆರಾಧಿಸಲು ಈ ಸಮಯದಲ್ಲಿ ಸಾಕಷ್ಟು ಅವಕಾಶ ದೊರೆಯುತ್ತದೆ.
ಆಷಾಡ ಮಾಸದ ಸೊಗಡು
ಧೋ ಎಂದು ಸುರಿಯುವ ವರ್ಷಾಕಾಲದಲ್ಲಿ ಹಬ್ಬಗಳ ಗೊಡವೆಯಿಲ್ಲ ಸ್ವತ: ಪರಿಸರವೇ ನೀರಲ್ಲಿ ತೊಯ್ದು ಶುದ್ದಿಗೊಂಡು ನಳಿನಳಿಸುತ್ತ ಸಂಭ್ರಮೋಲ್ಲಾಸ ಸೂಸುತ್ತ ಇರುತ್ತವೆ. ಇಂತಹ ಹಸಿರಿನ ಪ್ರಕೃತಿಯನ್ನು ನೋಡುವುದೇ ಒಂದು ಹಬ್ಬ ಬಹುಶಃ ಅದಕ್ಕೆ ಏನೋ ಜ್ಯೇಷ್ಠ ಮತ್ತು ಆಷಾಢಗಳಲ್ಲಿ ವ್ರತ-ಕಥೆಗಳದ್ದೇ ಮೇಲುಗೈ ಹೊರತು, ಹಬ್ಬದಾಚರಣೆಗಳಿಲ್ಲ. ಆಷಾಢ ಮಾಸವನ್ನು ಕೆಲವು ಭಾಗಗಳಲ್ಲಿ ಅಶುಭ ಎಂದು ಪರಿಗಣಿಸುತ್ತಾರೆ. ಬಹುಶಃ ಬಿರುಮಳೆಯ, ಕಾರ್ಮೋಡ ಕವಿಯುವ ಈ ಮಾಸದಲ್ಲಿ ಯಾವ ಶುಭ ಸಮಾರಂಭಗಳನ್ನೂ ನಿರಾಳವಾಗಿ ಆಚರಿಸಲು ಸಾಧ್ಯವಾಗದೆಂದು ಹೀಗೆ ನಿರ್ಧರಿಸದರೇನೋ. ಆಷಾಢ ಅಶುಭವೆನ್ನಲಿಕ್ಕೆ ಯಾವ ಶಾಸ್ತ್ರಾಧಾರವೂ ಇಲ್ಲ. ಇನ್ನು ಕೆಲವು ಭಾಗಗಳ ಜನರು ಕೊಂಚ ರಾಜಿ ಮಾಡಿಕೊಂಡು ಉತ್ತರಾಷಾಢದಲ್ಲಿ ಶುಭ ಕಾರ್ಯಗಳನ್ನು ಮಾಡಬಹುದು ಎನ್ನುತ್ತಾರೆ. ಬಹುಶಃ ಶ್ರಾವಣ ಸಮೀಪಿಸಿದಂತೆಲ್ಲಾ ಜಡಿಮಳೆಯ ಆರ್ಭಟ ಕಡಿಮೆಯಾಗಿ ಜಿಟಿಗುಟ್ಟತೊಡಗುವುದು ಈ ನಿರ್ಧಾರದ ಹಿನ್ನೆಲೆ ಇರಬಹುದು.
ಆಷಾಢದ ವಿಶೇಷಗಳು ಹಲವು.
ಶಿವನು ಪಾರ್ವತಿಗೆ ಅಮರತ್ವದ ರಹಸ್ಯವನ್ನು ಹೇಳಿದ್ದು; ಮಹಾ ಪತಿವ್ರತೆಯಾದ ಅನುಸೂಯಾದೇವಿಯು ನಾಲ್ಕು ಸೋಮವಾರ ಶಿವವ್ರತ ಮಾಡಿದ್ದು; ಮಹರ್ಷಿ ಗೌತಮರಿಂದ ಶಾಪಕ್ಕೊಳಗಾದ ದೇವೇಂದ್ರನು ಅದರ ವಿಮೋಚನೆಗಾಗಿ ನಾಲ್ಕು ಸೋಮವಾರ ವ್ರತವನ್ನು ಆರಂಭಿಸಿದ್ದು; ಬಲಿಚಕ್ರವರ್ತಿಯು ಶಾಂಡಿಲ್ಯ ವ್ರತವನ್ನು ಕೈಗೊಂಡಿದ್ದು ಇದೇ ಅಷಾಢಮಾಸದಲ್ಲಿ. ಈ ಮಾಸದಲ್ಲಿ ನದಿಗಳೆಲ್ಲ ಋತುಮತಿಯರಾಗಿರುತ್ತವೆ ಎಂಬ ನಂಬಿಕೆಯೂ ಇದೆ. ಹಿಂದೆ ವೃತ್ರಾಸುರನನ್ನು ಕೊಂದ ದೇವೇಂದ್ರನಿಗೆ ಅಂಟಿದ ಬ್ರಹ್ಮಹತ್ಯಾದೋಷದಲ್ಲಿ ಒಂದು ಪಾಲನ್ನು ಸ್ವೀಕರಿಸಿದ ನದಿಗಳು ಅಷಾಢಮಾ¸ದಲ್ಲಿ ಅವುಗಳನ್ನು ಅನುಭವಿಸಲು ಒಪ್ಪಿದವಂತೆ. ಹೀಗಾಗಿ ಈ ಮಾಸದಲ್ಲಿ ನದಿಸ್ನಾನ ಪುಣ್ಯಕರವಲ್ಲ. ಆದರೆ ತಪತೀನದಿ ಮಾತ್ರ ಈ ದೋಷದಿಂದ ಮುಕ್ತವಾಗಿತ್ತು. ಹೀಗಾಗಿ ಆಷಾಢದಲ್ಲಿ ತಪತೀನದಿಯ ಸ್ನಾನ ಮಾತ್ರ ಅತ್ಯಂತ ಪವಿತ್ರವೆಂಬ ನಂಬಿಕೆಯಿದೆ. ಇದು ತಪತೀನದಿಯ ತೀರ್ಥವೆಂದು ಸ್ಮರಿಸಿ ಯಾವುದೇ ನದಿಯ ನೀರನ್ನು ಮಿಂದರೂ ತೀರ್ಥಸ್ನಾನದ ಪುಣ್ಯ ಲಭಿಸುವುದಂತೆ.
‘ದೇವಶಯನೀ’ ಎಂದೇ ಹೆಸರಾದ ಪ್ರಥಮ ಏಕಾದಶೀ ವ್ರತಾಚರಣೆಯೂ ಆಷಾಢದಲ್ಲೇ ನಡೆಯುತ್ತದೆ. ಈ ದಿನದಂದು ವೈಷ್ಣವ ಸಮುದಾಯದಲ್ಲಿ ‘ತಪ್ತ ಮುದ್ರಾಧಾರಣೆ’ಗೆ ವಿಶೇಷ ಮಹತ್ವವಿದೆ. ತಪ್ತ ಮುದ್ರ ಧಾರಣೆಯನ್ನು ವಿಷ್ಣುವಿನ ಆಯುಧಗಳಾದ ಶಂಖ, ಚಕ್ರ ಲಾಂಛನಗಳನ್ನು ಬಂಗಾರದಲ್ಲಿ ಮಾಡಿಸಿರುತ್ತಾರೆ. ಅದನ್ನು ಹೋಮಾಗ್ಮಿಯಲ್ಲಿ ಕಾಯಿಸಿ ಯತಿಗಳಿಂದ ಮಂತ್ರÀಪೂರ್ವಕವಾಗಿ ಧಾರಣೆ ಮಾಡಿಸುವ ವಿಧಿಯೇ ತಪ್ತಮುದ್ರಧಾರಣೆ.
ಆ ಏಕಾದಶಿಯಿಂದ ಕಾರ್ತಿಕ ಶುದ್ಧ ಏಕಾದಶಿಯ ತನಕ ಮಹಾವಿಷ್ಣುವು ಯೋಗನಿದ್ರೆಯಲ್ಲಿರುವ ಕಾರಣ ದುಷ್ಟಶಕ್ತಿಗಳಿಂದ ರಕ್ಷಣೆ ಪಡೆಯಲು ಅಷಾಢದಲ್ಲಿ ವ್ರತಾನುಷ್ಠಾನಗಳನ್ನು ಆಚರಿÀಸಬೇಕೆಂಬ ನಿಯಮವಿದೆ. ವೇದಾಧ್ಯಯನ, ಪುರಾಣಪ್ರವಚನ, ಭಜನೆ, ಸಂಕೀರ್ತನೆ ಇತ್ಯಾದಿಗಳ ಮೂಲಕ ಭಗವಂತನನ್ನು ಭಕ್ತಿಯಿಂದ ಸ್ತುತಿಸಬೇಕು. ಈ ತಿಂಗಳಲ್ಲಿ ಪ್ರಾಯಶ್ಚಿತ ವಿಧಗಳನ್ನು ಆಚರಿಸಿದವರು ಎಲ್ಲ ಪಾಪಗಳಿಂದ ಮುಕ್ತರಾಗುತ್ತಾರೆ. ಗಾಯತ್ರಿ ಮತ್ತು ಪ್ರಣವಮಂತ್ರಗಳನ್ನು ಪಠಿಸುವುದು ಅತ್ಯಂತ ಶುಭಕರ. ಆಷಾಢದಲ್ಲಿ ಮಹಾವಿಷ್ಣುವಿಗೆ ಸಹಸ್ರ ನಮಸ್ಕಾರಗಳ ಸಮರ್ಪಣೆ, ದೀಪಾರಾಧನೆ, ಪ್ರದಕ್ಷಿಣೆ; ಕೊಡೆ, ಪಾದರಕ್ಷೆ, ನೆಲ್ಲಿಕಾಯಿ, ಉಪ್ಪು, ಮುಂತಾದ ಹಲವು ಬಗೆಯ ದಾನಾದಿಗಳಿಂದ ಸಿಗುವ ಫಲಗಳನ್ನು ವರಾಹಪುರಾಣವು ವಿವರಿಸಿದೆ.
ಆಷಾಢ ಏಕಾದಶಿಯ ಮತ್ತೊಂದು ದೊಡ್ಡ ಆಚರಣೆ ವಾರಕರಿಯದ್ದು. ಇದು ಪಂಢರಾಪುರದ ವಿಠೋಬನ ದರ್ಶನಕ್ಕೆಂದು ನಡೆಸುವ ಪಾದಯಾತ್ರೆ. ಮಹಾರಾಷ್ಟ್ರದಲ್ಲಿರುವ ಪಂಢರಾಪುರಕ್ಕೆ ಕರ್ನಾಟಕದ ದೇಹು ಮತ್ತು ಆಳಂದಿಯಿಂದ ಪಲ್ಲಕ್ಕಿ ಯಾತ್ರೆ ನಡೆಸಲಾಗುತ್ತದೆ.
ಅಷಾಢಮಾಸದ ಹುಣ್ಣಿಮೆಯು ವೇದವ್ಯಾಸರು ಜನಿಸಿದ ದಿನ. ಗುರುಪೂರ್ಣಿಮೆ ಎಂದು ವಿಶೇಷವಾಗಿ ಆಚರಿಸಲ್ಪಡುವ ಈ ದಿನವೇ ಯತಿಗಳ ಚಾತುರ್ಮಾಸ್ಯ ವ್ರತ ಆರಂಭವಾಗುತ್ತದೆ.
ಸೂರ್ಯನು ಮಿಥುನ ಮತ್ತು ಕರ್ಕಾಟಕ ರಾಶಿಗಳಲ್ಲಿ ಸಂಚರಿಸುವ ಅಷಾಢಮಾಸದಲ್ಲಿ ಕೃಷಿ ಕಾಯಕವನ್ನು ಭಗವಂತನ ಆರಾಧನೆಯನ್ನಾಗಿ ಸ್ವೀಕರಿಸಿ ದುಡಿಯುವ ರೈತನಿಗೆ ಅವನು ಅಭಿವೃದ್ಧಿಕರನಾಗುತ್ತಾನೆ. ವರ್ಷದಲ್ಲಿ ಬರುವ 24 ಏಕಾದಶಿಗಳಲ್ಲಿ ದೇವಶಯನೀ ಏಕಾದಶಿಯು ಆಷಾಢದ ಶುಕ್ಲ ಪಕ್ಷದಲ್ಲಿ ಆರಂಭವಾಗುತ್ತದೆ. ಅಂದು ಮಹಾವಿಷ್ಣುವಿನ ಪೂಜೆ ಮಾಡಿ ಉಪವಾಸ ಆಚರಿಸಿದರೆ ಘೋರ ಪಾಪಗಳೂ ನಾಶವಾಗುತ್ತವೆಯೆಂದು ಸ್ಮøತಿಗಳು ಹೊಗಳಿವೆ. ಈ ಮಾಸದಲ್ಲಿ ಬರುವ ಕರ್ಕಾಟಕ ಸಂಕ್ರಮಣದ ಮೊದಲಿನ ಮೂವತ್ತು ಘಳಿಗೆಗಳಲ್ಲಿ ಯಾವುದೇ ಫಲದ ಉದ್ದೇಶದಿಂದ ನಡೆಯುವ ವ್ರತಗಳು ಕೂಡ ಶೀಘ್ರ ಫಲಪ್ರದವೆಂದೂ ಅದರಲ್ಲಿಯೂ ಕಡೆಯ ಹತ್ತು ಘಳಿಕೆಗಳು ಇನ್ನೂ ಪುಣ್ಯದಾಯಕವೆಂದೂ ಪುರಾಣಗಳು ಹೇಳಿವೆ.
ಲಕ್ಷ್ಮಿಗೊಂದು ಪೂಜೆ
ಬೆಳಕಿನ ಒಂದು ಭಾಗವಾದ ಲಕ್ಷ್ಮಿಯ ಚೆಲುವು ಕಣ್ಣು ಕೋರೈಸುªಂತದ್ದು. ಮನಸ್ಸಿನ ಅರಿವು ಚಂದ್ರನಲ್ಲಿರುವ ಹೊಳಪು, ಬಂಗಾರದ ಬಣ್ಣ, ಚಿನ್ನ, ಹಾಲು ಮೋಸರು ಕೆನೆ ಇವೆಲ್ಲ ರೂಪಗಳು ಆ ದೇವಿಯೇ ಆಗಿದ್ದಾಳೆ. ಅನ್ನಭಾಗ್ಯವನ್ನು ಕರುಣಿಸುವ ಭೂಮಾತೆಯೂ ಲಕ್ಷ್ಮಿಯೇ, ಮಾಡುವ ಕಾರ್ಯವೂ ಲಕ್ಷ್ಮಿಯೇ, ಯಶಸ್ಸು-ಶ್ರೇಯಸ್ಸಿನ ಪ್ರತಿರೂಪವೂ ಲಕ್ಷ್ಮಿಯೇ. ಲಕ್ಷ್ಮಿಯೆಂದರೆ ಸಂಪತ್ತು. ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ಲಕ್ಷ್ಮಿಯೆಂದರೆ ಆಂತರಿಕ ಸಂಪತ್ತು. ಏಕಾದಶಿಯಂದು ನದಿಯಲ್ಲಿ ಮಿಂದು ಹಗಲಿನಲ್ಲಿ ಉಪವಸವಿದ್ದು ರಾತ್ರಿ ತುಲಸೀಮಣಿಸರ ಧರಿಸಿ ಲಕ್ಷ್ಮೀಸಹಿತ ವಿಷ್ಣುವಿನ ಆರಾಧನೆ ಮಾಡುತ್ತಾರೆ. ರಾತ್ರಿ ಜಾಗರಣೆ, ಮರುದಿನ ವಾಮನ ದ್ವಾದಶಿಯ ಪಾರಣೆಯ ಆಚರಣೆ ಸರ್ವ ಸಿದ್ಧಿಪ್ರದಾಯಕವೆಂದಿದ್ದಾನೆ ಶುಕಮುನಿ. ವರಾಹಪುರಾಣದಲ್ಲಿ ಚಾತುರ್ಮಾಸ ವ್ರತಾಚರಣೆಯ ಮಹತ್ವದೊಂದಿಗೆ ವಿಧಿ ವಿಧಾನಗಳ ಕುರಿತು ವಿವರಗಳಿವೆ. ಅದರಲ್ಲಿ ತಿಂಗಳಿಡೀ ತೊಡಗಲಾಗದವರು ದಶಮಿ, ಏಕಾದಶಿ ಮತ್ತು ದ್ವಾದಶಿಗಳಂದು ವ್ರತನಿರತರಾದರೂ ಅಕ್ಷಯ ಫಲಗಳಿವೆಯೆಂದು ಭೂದೇವಿಗೆ ವರಾಹನು ವಿವರಿಸುತ್ತಾನೆ. ಚಾತುರ್ಮಾಸದ ಪ್ರಥಮ ಮಾಸಕ್ಕೆ ಶ್ರೀಧರನು ಅಧಿಪತಿ, ದ್ವಿತೀಯ ಮಾಸಕ್ಕೆ ಹೃಷಿಕೇಶ ಒಡೆಯನು ತೃತೀಯ ಮಾಸಕ್ಕೆ ಪದ್ಮನಾಭನ ಯಜಮಾನಿಕೆ. ನಾಲ್ಕನೆಯ ತಿಂಗಳಿನ ನೇತೃತ್ವ ದಾಮೋದರ. ಈ ಅವಧಿಯಲ್ಲಿ ಅವರನ್ನು ಆರಾಧಿಸಬೇಕು.
ನವವಧೂವರರು ಆಷಾಢದಲ್ಲಿ ಜೊತೆಯಾಗಿರಬಾದೆಂಬ ಸಂಪ್ರದಾಯವೂ ಇದೆ. ದೇವತೆಗಳು ಶಯನಿಸಿರುವ ಮಾಸದಲ್ಲಿ ಸಂತಾನವಾದರೆ ದೈವಬಲವಿರುವುದಿಲ್ಲ ಎಂಬ ಕಾರಣಕ್ಕೆ ಆಷಾಢದಲ್ಲಿ ದಂಪತಿ ಮಿಲನವನ್ನು ನಿಷೇಧಿಸುವ ಆಚಾರವೂ ಪಾಲನೆಯಾಗುತ್ತಿದೆ.
#ಸಂಗ್ರಹ ಲೇಖನ#