ಚೆನ್ನೈ, ಆ.7-ಕಳೆದ ಹತ್ತು ದಿನಗಳಿಂದ ಇಲ್ಲಿನ ಕಾವೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಿಎಂಕೆ ವರಿಷ್ಠ ಮತ್ತು ಮಾಜಿ ಮುಖ್ಯಮಂತ್ರಿ ಡಾ. ಎಂ. ಕರುಣಾನಿಧಿ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ. ಅವರ ಅಂಗಾಂಗಗಳನ್ನು ಸಹಜ ಸ್ಥಿತಿಯಲ್ಲಿಡುವುದು ಸವಾಲಾಗಿದ್ದು, ಮುಂದಿನ ಕೆಲ ಗಂಟೆಗಳು ನಿರ್ಣಾಯಕ ಎಂದು ಆಸ್ಪತ್ರೆ ಹಿರಿಯ ವೈದ್ಯರು ತಿಳಿಸಿದ್ದಾರೆ. 94 ವರ್ಷದ ಅವರನ್ನು ನಿರಂತರ ತಪಸಣೆಗೆ ಒಳಪಡಿಸಲಾಗುತ್ತಿದ್ದು, ನುರಿತ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ ಎಂದು ಕಾವೇರಿ ಆಸ್ತತ್ರೆಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ವಯೋಸಹಜ ಸಮಸ್ಯೆಯಿಂದಾಗಿ ಅವರ ಅಂಗಾಂಗಗಳ ಕಾರ್ಯನಿರ್ವಹಣೆಯನ್ನು ಸಮಸ್ಯೆಯಾಗದಂತೆ ನಿಗಾ ವಹಿಸಲಾಗಿದೆ. ಆದರೆ ಕರುಣಾನಿಧಿ ಅವರ ಪರಿಸ್ಥಿತಿ ಮತ್ತಷ್ಟು ಕ್ಷೀಣಿಸಿದೆ. ಮುಂದಿನ ಕೆಲವು ಗಂಟೆಗಳಲ್ಲಿ ಚಿಕಿತ್ಸೆಗೆ ಅವರು ಹೇಗೆ ಸ್ಪಂದಿಸುತ್ತಾರೆ ಎಂಬುದರ ಮೇಲೆ ಅವರ ಆರೋಗ್ಯವನ್ನು ನಿರ್ಧರಿಸಲಾಗುತ್ತದೆ ಎಂದು ಅಸ್ಪತೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಅರವಿಂದನ್ ಸೆಲ್ವರಾಜ್ ಹೇಳಿದ್ದಾರೆ. ಜ್ವರ, ಮೂತ್ರನಾಳ ಸೋಂಕು, ಮತ್ತು ರಕ್ತದೊತ್ತಡ ಏರಿಳಿತ ಸಮಸ್ಯೆಯಿಂದಾಗಿ ಅವರು ಜು.28ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ನಂತರ ಅವರು ಚೇತರಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತಾದರೂ ನಿನ್ನೆಯಿಂದ ಅವರ ದೇಹಸ್ಥಿತಿ ಮತ್ತಷ್ಟು ವಿಷಮಗೊಂಡಿದೆ.