ಭಟ್ಕಳ ಮಾರಿ ಜಾತ್ರೆಗೆ ಚಾಲನೆ,
ಭಟ್ಕಳದಲ್ಲಿ ಮನೆ ಮಾಡಿದ ಹಬ್ಬದ ವಾತಾವರಣ.
ಭಟ್ಕಳದ ಪ್ರಸಿದ್ದ ಜಾತ್ರೆಗಳಲ್ಲೊಂದಾದ ಮಾರಿಜಾತ್ರೆಯು ಇಂದು ಮತ್ತು ನಾಳೆ ಜರುಗಲಿದ್ದು, ಸಂಭ್ರಮದ ವಾತಾವರಣ ಮನೆ ಮಾಡಿದೆ.
ಚೆನ್ನಪಟ್ಟಣ ಹನುಮಂತದೇವರ ರಥೋತ್ಸವ ಬಿಟ್ಟರೇ ಆಷಾಢದಲ್ಲಿ ಜರುಗುವ ಈ ಮಾರಿಜಾತ್ರೆಯೇ ಇಲ್ಲಿನ ಬಹುದೊಡ್ಡ ಜಾತ್ರೆಯಾಗಿದೆ. ಈ ಜಾತ್ರೆಗೆ ತಾಲೂಕಿನಿಂದಷ್ಟೇ ಅಲ್ಲದೇ, ಹೊರ ಜಿಲ್ಲೆಗಳಿಂದಲೂ ಭಕ್ತಾದಿಗಳು ಆಗಮಿಸಿ ದೇವಿಗೆ ಹರಿಕೆ ಅರ್ಪಿಸಿ ಪುನೀತರಾಗುತ್ತಾರೆ.
ಇತಿಹಾಸ.
ಮಾರಿ ಉತ್ಸವಕ್ಕೆ ಬಹಳ ಪುರಾತನ ಇತಿಹಾಸವಿದ್ದು,
ಅನಾಧಿಕಾಲದಿಂದಲೂ ಈ ಸಂಪ್ರದಾಯಗಳು ನಡೆದು ಬರುತ್ತಿವೆ.
ಇದಕ್ಕೆ ಹಲವಾರು ಕಥೆಗಳೂ ಇವೆ.
( ಅಂಥಾ ಹಲವಾರು ಕಥೆಗಳನ್ನು ನೀವು ಕೇಳಿರಬಹುದು )
ಸುಮಾರು ಎರಡೂವರೆ ದಶಕಗಳ ಹಿಂದೆ ಮಾರಿಜಾತ್ರೆ ಸಂಪೂರ್ಣವಾಗಿ ಗ್ರಾಮದೇವತೆಯ ಉತ್ಸವವಾಗಿದ್ದು, ಹಿಂದುಳಿದವರ ಹಾಗೂ ಪರಿಶಿಷ್ಠ ಜಾತಿ ಪಂಗಡದವರ ಮುಂದಾಳತ್ವದಲ್ಲಿ ನಡೆಯುತ್ತಿದ್ದ ವಿಶಿಷ್ಠವಾದ ಜಾತ್ರೆಯಾಗಿತ್ತು.
ಮಾರಿಕಟ್ಟೆಯಲ್ಲಿನ ಬೃಹತ್ ಆಲದ ಮರದಡಿಯಲ್ಲಿ ಮಂಗಳೂರು ಹಂಚಿನ ಮೇಲು ಹೊದಿಕೆಯ ಪುಟ್ಟ ಮಾರಿಗುಡಿ, ಗುಡಿಯ ಮುಂಭಾಗದಲ್ಲಿ ಬಲಿ ಹೊಂಡ;
ಈ ದೃಶ್ಯ ಎಂಥವರ ಎದೆಯನ್ನೂ ಝೆಲ್ ಎನಿಸುವಂತಿತ್ತು. ಜಾತ್ರೆಯಂದು ದೇವಿಯ ಎದುರು ಬಲಿ ಹೊಂಡದಲ್ಲಿ ನೂರಾರು ಕುರಿ- ಕೋಳಿಗಳನ್ನು ಬಲಿ ಕೊಡಲಾಗುತ್ತಿತ್ತು. ಇದರಿಂದಾಗಿ ಮಾರಿದೇವಿ ಎಂದರೇ, ರೌದ್ರದೇವತೆ ಎನ್ನಲಾಗುತ್ತಿತ್ತು.
ಆದರೇ,
ಸರಕಾರ ಪ್ರಾಣಿಬಲಿ ನಿಷೇಧಿಸಿದ ನಂತರ ಇಲ್ಲಿನ ಸಂಪೂರ್ಣ ಚಿತ್ರಣವೇ ಬದಲಾಗಿ ಹೋಯಿತು. ಮಾರಿಗುಡಿಯ ಸ್ಥಳದಲ್ಲಿ ಆಧುನಿಕ ಆರ್.ಸಿ.ಸಿ ಮೇಲ್ಚಾವಣಿಯ ಗರ್ಭಗುಡಿ ತಲೆಎತ್ತಿತು.
ಗರ್ಭಗುಡಿಯಲ್ಲಿ ಶಾಶ್ವತ ಮೂರ್ತಿ ಸ್ಥಾಪಿಸಲ್ಪಟ್ಟು, ವೈದಿಕ ವಿಧಾನದೊಂದಿಗೆ ದೇವಿಗೆ ಅನುದಿನವವೂ ಪೂಜೆ ಪುನಸ್ಕಾರಗಳು ನಡೆಯಲಾರಂಭಿಸಿ, ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯ ಸಂದರ್ಭದಲ್ಲಿ ಉತ್ಸವ ಮೂರ್ತಿಯನ್ನು ಸ್ಥಾಪಿಸಿ ಮೂರು ದಿನಗಳ ಕಾಲ ಜಾತ್ರೆಯನ್ನು ಸಂಭ್ರಮದೊಂದಿಗೆ ಆಚರಿಸುವ ಪರಿಪಾಠ ಬೆಳೆದು ಬಂತು.
ಆಮಟೆ ಮರದಲ್ಲಿ ಮೂರ್ತಿ: ಎಂದಿನಂತೆ ಉತ್ಸವ ಮೂರ್ತಿಯನ್ನು ಅಮಟೆ ಮರದಿಂದ ವಿಶ್ವಕರ್ಮ ಸಮುದಾಯದವರು ತಯಾರಿಸಿದ್ದಾರೆ.
ಚುಕ್ಕೆ ಬೀಳದ ಸೂಕ್ತವಾದ ಮರವನ್ನು ಗುರುತಿಸಿ, ಆಷಾಢ ಮಾಸ ಹುಣ್ಣಿಮೆಯ ನಂತರದ ಪ್ರಥಮ ಮಂಗಳವಾರದಂದು ಮೂರ್ತಿತಯಾರಿಕೆಯ ಮರವನ್ನು ಧಾರ್ಮಿಕ ವಿಧಿವಿಧಾನಗಳಿಂದ ಕಡಿಯಲಾಗಿತ್ತು. ಶ್ರೀದೇವಿಯ ಪೂರ್ವ ಬಿಂಬ ರೂಪವನ್ನು ಮಂಗಳವಾರದಿಂದ ಶುಕ್ರವಾರದವರೆಗೆ ಅದೇ ಜಾಗದಲ್ಲಿ ಕೆತ್ತನೆ ಮಾಡಿ ಶುಕ್ರವಾರದಂದು ಮಾರಿಯ ತವರು ಮನೆ ಎಂದೇ ಕರೆಯುವ ಮಣ್ಕುಳಿಯ ಮಾರಿ ಗದ್ದುಗೆಗೆ ತೆಗೆದುಕೊಂಡು ಬರಲಾಯಿತು.
ಅಲ್ಲಿಂದ ಇನ್ನೊಂದು ಮಂಗಳವಾರದವರೆಗೆ ದೇಹದ ಅಂಗಾಗಗಳನ್ನು ರಚಿಸಿ ಪೂರ್ಣಗೊಳಿಸಲಾಯಿತು. ಪೂರ್ಣಗೊಂಡ ಮೂರ್ತಿಗೆ ಮಂಗಳವಾರ ಸಾಯಂಕಾಲ ಗುಡಿಗಾರರು ಬಣ್ಣ ಬಳಿದರು. ಬಳೆಗಾಗರು ಬಳೆ ಹಾಗೂ ಆಭರಣ ತಯಾರಕರು ತಯಾರಿಸಿದ ಬೆಳ್ಳಿ ಹಾಗೂ ಚಿನ್ನದ ಆಭರಣಗಳನ್ನು ದೇವಿಗೆ ತೊಡಿಸಲಾಯಿತು.
ಮಂಗಳವಾರ ರಾತ್ರಿ ಮಾರಿ ಮುಖ್ಯಸ್ಥರ ಮನೆಯವರಿಂದ ಹಾಗೂ ಊರಿನವರಿಂದ ಪ್ರಥಮ ಪೂಜೆಯನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾರಿ ಗಂಡನ ಕಡೆಯವರು ಎಂದು ಕರೆಯಿಸಿಕೊಳ್ಳುವ ಕೊರಾರ ಜನಾಂಗದವರು ತಮ್ಮ ತಾಳ ತಬಲದೊಂದಿಗೆ ಆಗಮಿಸಿ ಮಾರಿಯನ್ನು ಮೆರವಣಿಗೆ ಮೂಲಕ ಕರೆದ್ಯೊಯಲು ಉತ್ಸುಕರಾಗಿದ್ದರು.
ಬುಧವಾರ ಬೆಳಿಗ್ಗೆ ನಾಲ್ಕು ಗಂಟೆ ಸುಮಾರಿಗೆ ಮಣ್ಕುಳಿ ಗ್ರಾಮಸ್ಥರು ಹಾಗೂ ಊರಿನವರು ಮಾರಿಯನ್ನು ಹೊತ್ತುಕೊಂಡು ಹೋಗಿ ಮಾರಿಗುಡಿಯಲ್ಲಿ ಪ್ರತಿಷ್ಠಾಪಿಸಿದರು. ಎರಡು ದಿವಸ ನಡೆಯುವ ಈ ಜಾತ್ರೆಯಲ್ಲಿ ಮೊದಲನೇ ದಿವಸ ಪರ ಊರಿನವರು ಸೇವೆ ಸಲ್ಲಿಸಿ ಹಬ್ಬ ಆಚರಿಸಿದರೆ, ಎರಡನೇ ದಿವಸವಾದ ಗುರುವಾರ ಸ್ಥಳೀಯರು ಸೇವೆ ಸಲ್ಲಿಸಿ ಹಬ್ಬ ಆಚರಿಸುತ್ತಾರೆ.
ಈ ಹಬ್ಬದ ಹೆಸರಿನಲ್ಲಿ ಭಕ್ತರು ಕುರಿ ಕೋಳಿಯನ್ನು ತಮ್ಮ ಮನೆಯಲ್ಲಿಯೇ ಕತ್ತರಿಸಿ ದೇವಿಗೆರಕ್ತ ಸಮರ್ಪಿಸುತ್ತಾರೆ.
ಮಾರಿ ರೂಪದಲ್ಲಿ ಕುಳಿತಿರುವ ಈ ದೇವಿಗೆ ಭಕ್ತರು ಊರಿಗೆ ಬರಬಹುದಾದ ಕಣ್ಣು ಬೇನೆ, ಸಿಡುಬು ಹಾಗು ಇನ್ನಿತರ ಸಾಂಕ್ರಾಮಿಕ ರೋಗಗಳನ್ನು ಬರದಂತೆ ತಡೆಗಟ್ಟುವಂತೆ ಭಕ್ತಿಯಿಂದ ಹೂವಿನ ಟೋಪಿ, ಎಲೆಯಿಂದ ಮಾಡಿದ ಹೂ ಕಟ್ಟು, ಬೆಳ್ಳಿಯ ಕಣ್ಣುಗಳನ್ನು ಅರ್ಪಿಸಿ ಕಾಪಾಡುವಂತೆ ಮೊರೆ ಇಡುತ್ತಾರೆ. ಗುರುವಾರ ಸಂಜೆ ಮಾರಿ ಮೂರ್ತಿಯನ್ನು ವಿಸರ್ಜನೆಗೆ ಸುಮಾರು ೬ ಕಿ.ಮೀ. ದೂರದ ಜಾಲಿ ಸಮುದ್ರತೀರಕ್ಕೆ ಹೊತ್ತೊಯ್ದು ಧಾರ್ಮಿಕ ವಿಧಿವಿಧಾನದನ್ವಯ ಪೂಜೆ ಸಲ್ಲಿಸಿ ಕೊನೆಯಲ್ಲಿ ವಿಗ್ರಹವನ್ನು ಛಿದ್ರಗೊಳಿಸಿ ಸಮುದ್ರದಲ್ಲಿ ವಿಸರ್ಜಿಸುವ ಮೂಲಕ ಮಾರಿಜಾತ್ರೆಗೆ ತೆರೆ ಬೀಳುತ್ತದೆ.