ರಾಜ್ಯಸಭಾ ಉಪಸಭಾಪತಿ ಚುನಾವಣೆಯಲ್ಲಿ ಎನ್ಡಿಎಗೆ ಜಯ

ನವದೆಹಲಿ, ಆ.9-ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯಸಭಾ ಉಪಸಭಾಪತಿ ಆಯ್ಕೆಯಲ್ಲಿ ಎನ್ಡಿಎ ಭರ್ಜರಿ ಜಯ ಸಾಧಿಸಿದೆ. ಯುಪಿಎ ಅಭ್ಯರ್ಥಿ, ಕನ್ನಡಿಗ ಬಿ.ಕೆ.ಹರಿಪ್ರಸಾದ್ ಹಾಗೂ ಎನ್ಡಿಎ ಅಭ್ಯರ್ಥಿಯಾಗಿ ಹರಿವಂಶ್ ನಾರಾಯಣಸಿಂಗ್ ನಡುವೆ ನೇರ ಹಣಾಹಣಿ ನಡೆದಿತ್ತು. ಇಂದು ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿಯಾಗಿರುವ ವೆಂಕಯ್ಯನಾಯ್ಡು ಅವರ ನೇತೃತ್ವದಲ್ಲಿ ನಡೆದ ಮತದಾನದಲ್ಲಿ ಆಡಳಿತಾರೂಢ ಎನ್ಡಿಎ ಜಯ ಸಾಧಿಸಿದೆ. ಈ ಮೂಲಕ ಮತ್ತೆ ಕಾಂಗ್ರೆಸ್ನ ಮೈತ್ರಿ ಕೂಟ ರಚನೆಗೆ ಹಿನ್ನಡೆಯಾಗಿದೆ. ಒಟ್ಟು ಹಾಜರಿದ್ದ ಸದಸ್ಯರ ಪೈಕಿ 125 ಮತಗಳನ್ನು ಪಡೆದು ಹರಿವಂಶ್ ನಾರಾಯಣಸಿಂಗ್ ಆಯ್ಕೆಯಾದರೆ, ಹರಿಪ್ರಸಾದ್ ಅವರಿಗೆ 105 ಮತಗಳು ಲಭಿಸಿತು.