– ಸುಮ ಚಂದ್ರಶೇಖರ್
ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ ಅತ್ಯಂತ ಪ್ರಮುಖ ವಿಚಾರಧಾರೆಯಾದ ಸರ್ವೋದಯ ತತ್ವದಲ್ಲಿ ಇಡೀ ಮನುಕುಲದ ತತ್ವ ಅಡಗಿದೆ. ಸರ್ವೋದಯವೆಂದರೆ ಸರ್ವರ ಉದಯ ಸಮಾಜದ ಉದ್ಧಾರವೆಂದರ್ಥ. ಸರ್ವೋದಯ ಸಿದ್ಧಾಂತದ ಪ್ರಕಾರ ಒಬ್ಬರಿಗೊಬ್ಬರು ಗೌರವದಿಂದ ಕಾಣಬೇಕು. ಸಮಾನತೆ, ಸತ್ಯ, ಪ್ರಾಮಾಣಿಕತೆಗೆ ಹೆಚ್ಚು ಪ್ರಾಧಾನ್ಯತೆ ಇರಬೇಕು. ವ್ಯಕ್ತಿಯ ಶ್ರೇಯಸ್ಸು ಸಮಾಸ್ತಿಯ ಶ್ರೇಯಸ್ಸಿನಲ್ಲಿದೆ. ಸರ್ವಭೂತ ಹಿತೇರಾತ ಸರ್ವೆಜನಾಃ ಸುಖಿನೋ ಭವಂತು ಬಹುಜನ ಹಿತಾಯ-ಬಹುಜನ ಸುಖಾಯ ಈ ವಾಕ್ಯಗಳನ್ನು ಹಲವಾರು ವರ್ಷಗಳಿಂದ ಹೇಳುತ್ತಿದ್ದರೂ ನಮ್ಮ ಸನಾತನ ಸಮಾಜದಲ್ಲಿ ಯಾವುದೇ ಪ್ರಯೋಜನವಾಗಿಲ್ಲ. ಅಲ್ಲದೆ, ಇದು ಎಲ್ಲರ ಹೃದಯವನ್ನು ಸ್ಪಂದಿಸಲಿಲ್ಲ. ಈ ಸಿದ್ಧಾಂತವನ್ನು ಅನುಷ್ಠಾನಗೊಳಿಸಿದ್ದರೆ ಸರ್ವೋದಯ ಸಮಾಜ ಎಂದೋ ನಿರ್ಮಾಣವಾಗುತ್ತಿತ್ತು.

ಗಾಂಧಿಯವರು ಈ ನಾಡಿನ ಅದ್ಭುತ. ಸ್ವಾವಲಂಬನೆಯ ಸಮಾಜದ, ಸಮಾನತೆಯ ಆದರ್ಶದ, ಸರಳತೆಯ ಪ್ರತೀಕವಾದ ಮಮತಾಮಯಿ ನಮ್ಮ ದೇಶದ ಅಪೂರ್ವ ಸಂಪತ್ತು. ಶಾಂತ ಸಂತನ ಅಗತ್ಯ ಎಂದಿಗಿಂತಲೂ ಇಂದು ಪ್ರಸ್ತುತವಾಗಿದೆ. ಯುವ ಜನಾಂಗಕ್ಕೆ ಗಾಂಧೀಜಿಯವರ ಜೀವನ ಆದರ್ಶಗಳ ಪರಿಚಯ ಇಂದು ಜರೂರಾಗಿದೆ. ಮಹಾತ್ಮ ಗಾಂಧೀಜಿಯವರು ಇಂದು ಕೇವಲ ಭಾರತದ ಸಂದರ್ಭದಲ್ಲಿ ಮಾತ್ರವೇ ಅಲ್ಲ ವಿಶ್ವದ ದೃಷ್ಠಿಯಲ್ಲೂ ಒಬ್ಬ ಮಹಾಪುರುಷರೆಂದೆನಿಸಿ ಕೊಂಡಿದ್ದಾರೆ. ನಿಜವಾದ ಅರ್ಥದಲ್ಲಿ ಅವರೊಬ್ಬ ವಿಶ್ವಮಾನವ, ಶ್ರೇಷ್ಠ ಶಿಕ್ಷಣ ತಜ್ಞ ಹಾಗೂ ಮಹಾನ್ ಮಾನವತಾವಾದಿ. ರಾಷ್ಟ್ರಪಿತ ಮಹಾತ್ಮಾಗಾಂಧೀಜಿಯವರ ಅತ್ಯಂತ ಪ್ರಮುಖವಾದ ತತ್ವವೆಂದರೆ ಸರ್ವೋದಯ ಸಿದ್ಧಾಂತ.

ವೃತ್ತಿಯಲ್ಲಿ ಅಸಮಾನತೆಯ ಬೇಧ ತೊಡೆದು ಹಾಕಬೇಕು. ನ್ಯಾಯಾಧೀಶ, ವಕೀಲ, ವೈದ್ಯ, ಕ್ಷೌರಿಕ ಎಲ್ಲರೂ ಸರಿಸಮಾನರು ಎಂದು ಭಾವಿಸಬೇಕು. ಈ ವೃತ್ತಿಗಳು ಸಮಾಜ ಸೇವೆಗಾಗಿ ಲೋಕೋಪಕಾರಕ್ಕಾಗಿ ಅಸ್ತಿತ್ವದಲ್ಲಿದ್ದು, ಸೇವೆಯಲ್ಲಿ ಅಂತರವಿರಬಾರದು. ಬಡವ, ಶ್ರೀಮಂತ, ಅಸಮಾನತೆ, ದ್ವೇಷ, ಅಸೂಯೆ ಈ ತಾರತಮ್ಯ ಹೋಗಲಾಡಿಸಿ ಪ್ರೀತಿ ಬೆಳೆಸುವುದು ಸರ್ವೋದಯ ಸಿದ್ಧಾಂತವಾಗಿದೆ. ಸಮಾಜದಲ್ಲಿ ಮಾನವರ ನಡುವೆ ಮೇಲು-ಕೀಳು, ಉಚ್ಛ-ನೀಚ ಎಂಬ ಭಾವನೆ ಅಸ್ತಿತ್ವದಲ್ಲಿದ್ದು, ಕೆಲವರನ್ನು ಮುಟ್ಟಿದರೆ ಪಾಪ ಬರುತ್ತದೆ ಎನ್ನುವಷ್ಟರ ಮಟ್ಟಿಗೆ ಸಮಾಜದಲ್ಲಿ ವಿಷಮತೆ ಬೆಳೆದು ಬಂದಿದೆ. ಈ ಬೇಧ-ಭಾವ ತೊಲಗಬೇಕಾದರೆ ಅದು ಸರ್ವೋದಯ ಸಿದ್ಧಾಂತದಿಂದ ಮಾತ್ರ ಸಾಧ್ಯ.

ಸರ್ವೋದಯ ಸಮಾಜದಲ್ಲಿ ಬಡವ-ಬಲ್ಲಿದ, ಮೇಲು-ಕೀಳು ದಟ್ಟದಾರಿದ್ರ್ಯ ಇರುವುದಿಲ್ಲ. ಹರಿಜನ, ಗಿರಿಜನ, ಮಕ್ಕಳು, ಮಹಿಳೆಯರು, ಅಂಗವಿಕಲರು ಈ ಎಲ್ಲರ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಭೂದಾನ, ಸಂಪತ್ತಿನ ದಾನ, ವಿದ್ಯಾದಾನ ಮತ್ತು ಶ್ರಮಾದಾನ ಸಾಧ್ಯವಾಗುತ್ತದೆ. ಸರ್ವೋದಯ ಸಮಾಜದಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಪ್ರಾಮಾಣಿಕತೆಯಿಂದ ದುಡಿದು ತಿನ್ನಬೇಕು. ದೈಹಿಕ ಶ್ರಮದಿಂದ ಜೀವನ ಸಾಗಿಸಬೇಕು. ಎಲ್ಲರ ಕಲ್ಯಾಣದ ಜತೆಗೆ ಇತರರ ಕಲ್ಯಾಣವನ್ನೂ ಬಯಸಬೇಕು. ಸ್ತ್ರೀ-ಪುರುಷರಿಬ್ಬರು ಸಮಾನರೆಂದು ಗಾಂಧೀಜಿಯವರು ಬಯಸಿದ್ದರು. ಪುರುಷರಿಗಿಂತ ಸ್ತ್ರೀಯರಿಗೆ ವಿಶೇಷ ಸ್ಥಾನಮಾನ ನೀಡಿದ್ದರು. ಎಲ್ಲಿ ಸ್ತ್ರೀ-ಪುರುಷರಿಬ್ಬರಿಗೂ ಸಮಾನತೆ ಇರುತ್ತದೆಯೋ ಅಲ್ಲಿ ಅಸ್ಪೃ ಶ್ಯತೆಯಂತಹ ಕೀಳು ಭಾವನೆ ಇರುವುದಿಲ್ಲವೆಂದು ಗಾಂಧೀಜಿ ಅಂತಜರ್Áತಿ ವಿವಾಹಕ್ಕೆ ಪ್ರೋತ್ಸಾಹ ನೀಡಿದ್ದರು.

ಗಾಂಧೀಜಿಯವರ ಬದುಕೇ ಒಂದು ಮಹಾಕಾವ್ಯ. ಸರಳತೆ ಸ್ಪಷ್ಟತೆ ಹಾಗೂ ಭಾರತೀಯ ಸಾಹಿತ್ಯದಲ್ಲಿ ಗಾಂಧೀಜಿಯವರ ಸ್ಥಾನ ಪ್ರಮುಖವಾದದ್ದು. ಗಾಂಧೀಜಿ ರಾಷ್ಟ್ರ ನೀತಿ-ನಿಯಮಗಳ ನ್ಯಾಯ, ಸತ್ಯ, ಅಹಿಂಸೆಗಳನ್ನು ರೂಢಿಸಿಕೊಂಡು ಇದನ್ನು ರಾಷ್ಟ್ರ ಮತ್ತು ರಾಜ್ಯ ಗ್ರಾಮಗಳಲ್ಲಿ ಪ್ರಯೋಗಿಸಿ ಯಶಸ್ಸು ಕಂಡರು. ಗಾಂಧೀಜಿಯವರ ದೂರದೃಷ್ಟಿಯ ಕಲ್ಪನೆ ಇಂದಿಗೂ ಪೂರ್ಣಗೊಂಡಿಲ್ಲವೆಂಬುದು ವಿಪರ್ಯಾಸದ ಸಂಗತಿಯಾಗಿದೆ. ಅನಂತ ತಾರಾಮಂಡಲದಲ್ಲಿ ಅದೆಷ್ಟೋ ಅಗಣಿತ ತಾರಾಪುಂಜಗಳಿದ್ದರೂ ಭುವಿಗೆ ಬೆಳಕನೀಯಲು ಸೂರ್ಯ-ಚಂದ್ರರೇ ಹೇಗೆ ಸಮೀಪ ಸಂಪನ್ಮೂಲರೋ ಹಾಗೆಯೇ ಅದೆಷ್ಟೋ ಮತ-ಧರ್ಮಶಾಸ್ತ್ರ ತಜ್ಞರು ಗತಿಸಿಹೋಗಿದ್ದರೂ ಸತ್ಯ-ಅಹಿಂಸೆ ಎಂಬ ಮನುಷ್ಯ ಜೀವಿಯ ನಿಜಾಂತರಾಳದ ಅಂತಃಸತ್ತ್ವವನ್ನು ಸರ್ವರಲ್ಲಿಯೂ ವ್ಯಕ್ತಪಡಿಸಲು ಕಾರಣೀಭೂತರಾದ ಏಕೈಕ ಸಂತನೇ ಈ ಮಹಾತ್ಮ ಗಾಂಧೀಜಿ. ಮೋಹನದಾಸ ಕರಮಚಂದಗಾಂಧಿ ಇದು ಭಾರತೀಯ ಹೃನ್ಮನಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿರುವ ಸ್ವಾತಂತ್ರ್ಯ ಮತ್ತು ಸತ್ಯಾಗ್ರಹ ಹೋರಾಟಕ್ಕೆ ಅರ್ಪಿಸಿದ ಧೀಮಂತ ಚೇತನದ ಹೆಸರು.

ಮಹಾತ್ಮಾ ಗಾಂಧಿ ಶ್ರೀಮಂತರ ಮಗನಾಗಿ ಹುಟ್ಟಿದ್ದು, ತಂದೆ ಕರಮಚಂದ ಗಾಂಧಿ ಸಂಸ್ಥಾನದ ದಿವಾನರಾಗಿದ್ದರೂ ಅವರಲ್ಲಿನ ಆ ರಾಜಕೀಯ ಮಹತ್ವಾಕಾಂಕ್ಷೆ ಬಾಲಕರಾದ ಗಾಂಧೀಜಿಯವರಲ್ಲಿ ಬಹಳ ನಿಧಾನವಾಗಿ ಪುನಃ ವ್ಯಕ್ತವಾಯಿತು. ತಮ್ಮ ಬಾಲ್ಯದಲ್ಲಿ ವಿದ್ಯಾಭ್ಯಾಸದ ಅವಧಿಯಲ್ಲಿಯೇ ಅಂತರಂಗದ ಜೀವಸತ್ತ್ವಗಳಾದ ನ್ಯಾಯಕ್ಕಾಗಿ ಹೋರಾಟ, ಸತ್ಯನಿಷ್ಠೆ ಇವು ಅವ್ಯಕ್ತರೂಪದಲ್ಲಿಯೋ ಅಥವಾ ಪ್ರಜ್ಞಾವಸ್ಥೆಯಲ್ಲಿಯೋ ಗಾಂಧೀಜಿಯವರಲ್ಲಿ ವ್ಯಕ್ತವಾಗುತ್ತಿತ್ತು. ತುಂಬಾ ಕೀಳರಿಮೆ, ಭಯ, ಇತ್ಯಾದಿ ವಯೋಸಹಜ ಲಕ್ಷಣಗಳು ತಮ್ಮಲ್ಲಿ ಇದ್ದರೂ ಪ್ರಚಂಡ ಆತ್ಮವಿಶ್ವಾಸದಿಂದ ಅವುಗಳನ್ನು ಮೆಟ್ಟಿನಿಂತವರು ಮಹಾತ್ಮ ಗಾಂಧೀಜಿ.

ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ಶಾಂತಿ ಮತ್ತು ಅಹಿಂಸಾತ್ಮಕ ಚಳವಳಿಗಳ ಮೂಲಕ ಉಪವಾಸ ಸತ್ಯಾಗ್ರಹ ಮಾಡಿ ಬ್ರಿಟಿಷರನ್ನೇ ಗೆದ್ದರು. ತೆರಿಗೆ ನಿರಾಕರಣ ಹೋರಾಟ, 250 ಮೈಲಿಗಳ ದಂಡಿಯ ಉಪ್ಪಿನ (1930ರ ಮಾರ್ಚ್)ಸತ್ಯಾಗ್ರಹ, ಬ್ರಿಟಿಷರೇ ಭಾರತ ಬಿಟ್ಟು ತೊಲಗಿ (1942) ಈ ಹೋರಾಟಗಳನ್ನು ಕೈಗೊಂಡಾಗ ಇಡೀ ರಾಷ್ಟ್ರವೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡಿತ್ತು. ಗಾಂಧೀಜಿ ಅದೆಷ್ಟೋ ಬಾರಿ ಅನ್ಯಾಯದ ವಿರುದ್ಧ ಪ್ರತಿಭಟಿಸಿ ಸೆರೆಮನೆ ವಾಸಗಳನ್ನು ಅನುಭವಿಸಿದ್ದಾರೆ.

ಶ್ರಮಿಕರ ಬದುಕು ನೈಜ ಬದುಕು, ಅರ್ಥಪೂರ್ಣ ಬದುಕು ಮತ್ತು ಸಾರ್ಥಕ ಬದುಕು. ಪ್ರಾಮಾಣಿಕವಾಗಿ ದೈಹಿಕ ಶ್ರಮವನ್ನು ತ್ಯಾಗಮಾಡಿ ತನ್ನ ಮತ್ತು ಸಂಸಾರದ ತುತ್ತಿಗಾಗಿ ಪ್ರಯತ್ನಿಸುವವನೇ ಶ್ರಮಿಕ ಎಂದು ಗಾಂಧೀಜಿ ಹೇಳಿದ್ದಾರೆ. ದುಡಿದು ತಿನ್ನುಎಂಬುದು ನೀತಿಶಾಸ್ತ್ರದ ಬೋಧನೆಯಾಗಿದೆ. ಸರ್ವೋದಯದ ಮುಖ್ಯ ಧ್ಯೇಯವಾದ ಎಲ್ಲರ ಅಭ್ಯುದಯ ಸಾಧಿಸಲ್ಪಟ್ಟಾಗ ಶ್ರಮಿಕನಿಗೆ ಕಲ್ಯಾಣ ಪ್ರಾಪ್ತಿಯಾಗುತ್ತದೆ. ಎಲ್ಲ ಜನರು ಜೀವನಕ್ಕೋಸ್ಕರ ದುಡಿದು ತಿನ್ನುವ ಹಕ್ಕುಳ್ಳವರಾಗಿದ್ದಾರೆ. ಅವರ ದೃಷ್ಟಿಯಲ್ಲಿ ಸರ್ವೋದಯ ನೈಜ ಪ್ರಜಾಪ್ರಭುತ್ವ ಸೃಷ್ಟಿಗೆ ಕಾರಣವಾಗುತ್ತದೆ. ಆಗ ನಾವು ಜನರಲ್ಲಿ ಸಾಧ್ವಿತ್ವ ಮತ್ತು ವಿವೇಕ ಸದ್ಗುಣಗಳನ್ನು ಕಾಣಬಹುದು ಮತ್ತು ಸಮಾಜದ ಶ್ರೇಯೋಭಿವೃದ್ಧಿಗೆ ಸಹಾಯವಾಗುವುವು. ಸತ್ಯವನ್ನು ಆಧರಿಸಿರಬೇಕು. ಭಾರತೀಯನಾಗಿರು, ಸದಾ ದೇಶೀಯ ಉತ್ಪನ್ನಗಳನ್ನು ಬಳಸು ಎಂಬುದು ಮಹಾತ್ಮ ಗಾಂಧೀಜಿಯವರ ಉಪದೇಶವಾಗಿದೆ.

ಜನರು ತಮ್ಮ ಬದುಕನ್ನು ಪವಿತ್ರ ಬದುಕನ್ನಾಗಿಸಬೇಕಾದರೆ ಮತ್ತು ತ್ಯಾಗ ವೈರಾಗ್ಯ, ಪರೋಪಕಾರ ಮನೋಭಾವನೆ ನಮ್ಮಲ್ಲಿ ರೂಪಿಸಿಕೊಳ್ಳಬೇಕಾದರೆ, ಮಾದಕ ಪಾನೀಯಗಳು ಹಾಗೂ ಮಾಂಸಾಹಾರದಿಂದ ದೂರ ಉಳಿಯಬೇಕು ಎಂಬ ಪ್ರಮುಖ ವಿಷಯಗಳಿಗೆ ಅವರು ಪ್ರಾತಿನಿಧ್ಯ ನೀಡುತ್ತಾರೆ. ಅಹಿಂಸಾ ಮಾರ್ಗ, ನೆರೆಹೊರೆಯವರೊಂದಿಗೆ ಸಹೋದರತಾ ಭಾವನೆ ಮತ್ತು ಅವರಿಗೆ ಕೈಲಾದ ಸೇವೆ ಒದಗಿಸುವುದು, ಎಲ್ಲಾ ಧರ್ಮಗಳನ್ನು ಗೌರವದಿಂದ ಕಾಣುವುದು ಮತ್ತು ಅಸ್ಪೃಶ್ಯತೆಯನ್ನು ನಿರ್ದಾಕ್ಷಿಣ್ಯವಾಗಿ ತೊಡೆದುಹಾಕುವುದು. ಈ ನಾಲ್ಕು ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ಬರುವಂತೆ ಪ್ರಯತ್ನಿಸಿದಾಗ ದೇಶದ ಮಿಲಿಯನ್‍ಗಟ್ಟಲೆ ಜನರ ನಡುವೆ ಸಹಕಾರ ಭಾವನೆ ಸೃಷ್ಟಿಸಲು ಸಾಧ್ಯ