ಅರ್ಜಿಯೇ ಹಾಕದ ಕರ್ನಾಟಕದ ಈ ಮಹಿಳೆಯನ್ನು ಶ್ರೇಷ್ಠ ತಾಯಿಯೆಂದ ಮೋದಿ ಸರಕಾರ!! ಪಾರದರ್ಶಕ ಆಡಳಿತಕ್ಕೆ ಸಾಕ್ಷಿಯಾಯಿತು ಮೋದಿ ಸರಕಾರದ ನಡೆ!!

ಅದೇನೇನೋ ಸರ್ಕಸ್ ಮಾಡಿ ಪ್ರಶಸ್ತಿಯನ್ನು ಬಾಚುವ ಈ ಕಾಲದಲ್ಲಿ ಅದ್ಯಾವುದನ್ನೂ ಬಯಸದೇ ಕಿತ್ತು ತಿನ್ನುವ ಬಡತನವಿದ್ದರೂ ಪತಿಯ ಅಕಾಲಿಕ ಸಾವಿನ ಆಘಾತದ ನಡುವೆ ಹತ್ತಾರು ಕಷ್ಟ, ಸವಾಲುಗಳ ಬೆಟ್ಟವನ್ನು ಬೆನ್ನಿಗೆ ಕಟ್ಟಿಕೊಂಡೇ ಕೂಲಿ ಮಾಡಿ ಅಂಧ ಮಗನನ್ನು ಐ ಎ ಎಸ್ ಓದಿಸಿ ಇದೀಗ ದೇಶಕ್ಕೆಯೇ ಮಾದರಿ ತಾಯಿಯಾಗುತ್ತಾರೆ ಎಂದರೆ ಅದೆಂತಹ ಸೌಭಾಗ್ಯ ಅಲ್ವೇ?!!
ಹೌದು, ಕುಣಿಗಲ್ ತಾಲೂಕು ಹುಲಿಯೂರುದುರ್ಗ ಹೋಬಳಿ ಚೌಡನಕುಪ್ಪೆ ಗ್ರಾಮದ ಮುನಿಯಮ್ಮ ಇದೀಗ ಇಡೀ ದೇಶದ ಗಮನ ಸೆಳೆದಿದ್ದಾರೆ. ಪತಿ ಹೊನ್ನಯ್ಯ ನಿಧನರಾದ ಬಳಿಕ ನಾಲ್ಕು ಮಕ್ಕಳ ಜತೆ ಕುಟುಂಬದ ಹೊಣೆ ಈಕೆಯ ಹೆಗಲಿಗೆ ಬಿದ್ದಿತು. ನಾಲ್ಕು ಮಕ್ಕಳನ್ನು ಪಡೆದ ದಂಪತಿಗೆ ಮಕ್ಕಳ, ಆಟ, ಪಾಠ ಕಂಡು ಖುಷಿಪಡುವ ಅದೃಷ್ಟವೂ ಸಿಗಲಿಲ್ಲ. ಏಕೆಂದರೆ ಈ ಎಲ್ಲ ಮಕ್ಕಳಿಗೂ ಒಂದಲ್ಲ ಒಂದು ಅಂಗವೈಕಲ್ಯ!. ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿಸಿದ ನಂತರ ಬೇರೆ ಬೇರೆ ಕಾರಣಗಳಿಂದ ಆ ಹೆಣ್ಣು ಮಕ್ಕಳೂ ನಿಧನರಾದರು.
ಇಂತಹ ಸಂದರ್ಭದಲ್ಲೂ ಎದೆಗುಂದದೆ, ದೇಶದ ಮಾದರಿ ಅಮ್ಮ ಎಂದು ಕರೆಸಿಕೊಂಡಿರುವ ಮುನಿಯಮ್ಮ, ಇಬ್ಬರು ಗಂಡು ಮಕ್ಕಳ ಪೈಕಿ ಕಿರಿಯ ಮಗ ಕೆಂಪಹೊನ್ನಯ್ಯ ಬಾಲ್ಯದಲ್ಲಿಯೇ ಕಣ್ಣು ಕಳೆದುಕೊಂಡು ಮೈಸೂರಿನ ಅಂಧ ಮಕ್ಕಳ ಶಾಲೆಯಲ್ಲಿ ಓದುವಂತಾಯಿತು. ಇನ್ನು, ಬೆನ್ನು ಮೂಳೆ ಮುರಿದಿದ್ದರಿಂದ ಹಿರಿಯ ಮಗ ನಂಜಪ್ಪ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದರು. ಇಷ್ಟೆಲ್ಲ ಕಷ್ಟಗಳಿದ್ದರೂ ಬುದ್ಧಿವಂತ ಮಗನ ಎದೆಗೆ ಎರಡಕ್ಷರ ಹಾಕಲೇಬೇಕು ಎಂದು ಕನಸು ಹೊತ್ತು ಕೆಂಪಹೊನ್ನಯ್ಯನಿಗೆ ಕಷ್ಟದಲ್ಲೂ ಶಿಕ್ಷಣ ಕೊಡಿಸಿದರು.
ಇದರ ಫಲವಾಗಿ ಇಂದು ಕೆಂಪಹೊನ್ನಯ್ಯ ಭಾರತೀಯ ಆಡಳಿತ ಸೇವೆಯಲ್ಲಿದ್ದಾರೆ. ಇನ್ನೊಬ್ಬ ಮಗ ನಂಜಪ್ಪ ಅಂಗವಿಕಲರ ಕಲ್ಯಾಣ ಇಲಾಖೆಯಲ್ಲಿದ್ದು, ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ!! ಹೌದು, ಮುನಿಯಮ್ಮ ಅವರ ಕಿರಿಯ ಪುತ್ರ ಕೆಂಪಹೊನ್ನಯ್ಯ 4ನೇ ತರಗತಿಯಲ್ಲಿದ್ದಾಗ ಅನುವಂಶೀಯ ಕಾರಣದಿಂದ ಕಣ್ಣಿನ ರೆಟಿನಾ ಪೊರೆ ಸಮಸ್ಯೆಯಿಂದ ದೃಷ್ಟಿಹೀನರಾಗಿದ್ದರು. ಮಗನಿಗೆ ಮೈಸೂರಿನ ಅಂಧ ಮಕ್ಕಳ ಪಾಠಶಾಲೆಯಲ್ಲಿ ಓದಿಸಲು ಮುನಿಯಮ್ಮ ಹೊಟ್ಟೆಬಟ್ಟೆ ಕಟ್ಟಿದರಲ್ಲದೇ ಮೂರನೇ ಪ್ರಯತ್ನದಲ್ಲಿ ಕೆಂಪಹೊನ್ನಯ್ಯ ಕನ್ನಡದಲ್ಲಿ 2017ರ ನಾಗರಿಕ ಸೇವಾ ಪರೀಕ್ಷೆಯಲ್ಲಿ 340ನೇ ರ್ಯಾಂಕ್ ಗಳಿಸಿ, ತಾಯಿ ಆಸೆ ಈಡೇರಿಸಿದ್ದರು.
ಮೈಸೂರಿನ ಒಂಟಿಕೊಪ್ಪಲ್ ಸರಕಾರಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಕೆಂಪಹೊನ್ನಯ್ಯ, ಪ್ರಸ್ತುತ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಪ್ರೊಬೇಷನರಿ ಐ ಎ ಎಸ್ ಆಗಿ ಕರ್ತವ್ಯದಲ್ಲಿದ್ದಾರೆ. ಹಾಗಾಗಿ ಮುನಿಯಮ್ಮ ಅವರ ಇಂತಹ ಅಚಲವಾದ ಛಲಕ್ಕೆ ರಾಷ್ಟ್ರ ಮಟ್ಟದ “ಮಾದರಿ ತಾಯಿ” ಪ್ರಶಸ್ತಿಯೂ ತಾನಾಗಿ ಒಲಿದು ಬಂದಿದೆ!! ಹೌದು… ಕೇಂದ್ರ ಸರಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪ್ರತಿವರ್ಷ ವಯೋಶ್ರೇಷ್ಠ ಸನ್ಮಾನದ ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನಿಸುತ್ತದೆ. ಇದಕ್ಕೆ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗುತ್ತವೆ. ಆದರೆ ಮುನಿಯಮ್ಮ ಪ್ರಶಸ್ತಿ ಬಯಸಿದವರಲ್ಲ, ಅರ್ಜಿಯನ್ನೂ ಸಲ್ಲಿಸಲಿಲ್ಲ. ಮಗ ನಂಜಪ್ಪ ಮೂಲಕ ಅಂಗವಿಕಲ ಕಲ್ಯಾಣ ಇಲಾಖೆ ಅಧಿಕಾರಿಗಳು ಮುನಿಯಮ್ಮನ ಕಥೆ ತಿಳಿದುಕೊಂಡು ಐ ಎ ಎಸ್ ಮಾಡಿದ ಮಗನ ವಿಷಯ ಆಧರಿಸಿ ಕೇಂದ್ರ ಸರಕಾರಕ್ಕೆ ಮಾಹಿತಿ ಕಳುಹಿಸಿ ಕೊಟ್ಟಿದ್ದರಿಂದ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.

ಈ ಬಗ್ಗೆ ಮಾತನಾಡಿದ ಮಾದರಿ ತಾಯಿ ರಾಷ್ಟ್ರಪ್ರಶಸ್ತಿ ಪುರಸ್ಕೃತೆ ಮುನಿಯಮ್ಮ, “ಪ್ರಶಸ್ತಿ ಬಂದಿದೆ ಅಂತ ಎಲ್ರೂ ಹೇಳಿದ್ರು, ತಾಯಿಯಾಗಿ ಎಲ್ಲಾರೂ ಮಾಡಿದ್ನೇ ನಾನು ಮಾಡಿದ್ದೀನಿ ಅಷ್ಟೇ. ಪ್ರಶಸ್ತಿ ಬಂದಿದ್ರೆ ಅದು ನನ್ನಂತ ಎಲ್ಲ ತಾಯಂದ್ರಿಗೂ ಸಲ್ಲಬೇಕು” ಎಂದು ಹೇಳಿದ್ದಾರೆ!! ಹೀಗೆ ತನ್ನ ಮಕ್ಕಳು ಒಂದೊಳ್ಳೆ ಸ್ಥಾನಮಾನದಲ್ಲಿರಬೇಕೆಂಬ ಮಹತ್ತವಾದ ಕನಸಿನಿಂದಾಗಿ ಬೆನ್ನ ಹಿಂದೆ ಸಾವಿರಾರು ಕಷ್ಟಗಳ ಸರಮಾಲೆಯೇ ಮುನಿಯಮ್ಮ ಅವರ ಬೆನ್ನಿಗೆ ಅಂಟಿದ ಬೇತಾಳದಂತೆ ಬಂದರೂ ಅದಕ್ಕೆ ಹಿಂಜರಿಯದೇ ಕೂಲಿ ಮಾಡಿ ಅಂಧ ಮಗನನ್ನು ಐ ಎ ಎಸ್ ಓದಿಸಿದ ಆ ದಿಟ್ಟ ತಾಯಿ ಮುನಿಯಮ್ಮ, ಈಗ ದೇಶಕ್ಕೆ ಮಾದರಿ ಅಮ್ಮ ಎನಿಸಿಕೊಂಡಿದ್ದಾರೆ. ಹಾಗಾಗಿ ಕೇಂದ್ರ ಸರಕಾರ ಈಕೆಗೆ ಸೋಮವಾರ(ಅ.1)ದೆಹಲಿಯಲ್ಲಿ “ಮಾದರಿ ತಾಯಿ ಪ್ರಶಸ್ತಿ” ನೀಡಿ ಗೌರವಿಸಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.

ಒಟ್ಟಿನಲ್ಲಿ ದೇಶದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ನೀಡುತ್ತಿರುವ ನರೇಂದ್ರ ಮೋದಿ ಸರಕಾರವು ಅರ್ಜಿಯೇ ಹಾಕದ ಮುನಿಯಮ್ಮ ಅವರಿಗೆ ಶ್ರೇಷ್ಠ ಪ್ರಶಸ್ತಿಗಳಲ್ಲಿ ಒಂದಾಗಿರುವ “ಮಾದರಿ ತಾಯಿ” ಪ್ರಶಸ್ತಿ ನೀಡಿ ಗೌರವಿಸುತ್ತಿದೆ ಎಂದರೆ, ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರಕಾರದ ಪಾರದರ್ಶಕ ಆಡಳಿತಕ್ಕೆ ಇದು ಉತ್ತಮ ಸಾಕ್ಷಿಯಾಗಿ ನಿಂತಿದೆ!!