ಕಂಗನಾ ರಣಾವತ್ ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಪಾತ್ರದಲ್ಲಿ ನಟಿಸುತ್ತಿರುವ ‘ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ’ ಸಿನಿಮಾ ಬಹುನಿರೀಕ್ಷಿತ ಟೀಸರ್ ಹೊರಬಂದಿದೆ. 2 ನಿಮಿಷದ ಟ್ರೈಲರ್ ನಲ್ಲಿ ಕಂಗನಾ ಝಾನ್ಸಿ ರಾಣಿಯ ಅವತಾರದಲ್ಲಿ ಅಬ್ಬರಿಸಿದ್ದಾಳೆ. ಟ್ರೈಲರ್ ನೋಡುಗರ ಮೈನವಿರೇಳಿಸುವಂತಿದ್ದು ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಝಾನ್ಸಿ ರಾಣಿ ಲಕ್ಷ್ಮಿಬಾಯಿಯ ಜೀವನ ಕಥೆ ಆಧರಿಸಿದ ಈ ಸಿನಿಮಾ ಮೇಕಿಂಗ್ ನಿಂದಲೇ ದೊಡ್ಡ ಸುದ್ದಿ ಮಾಡುತ್ತಿದೆ. ಇದೀಗ, ‘ಮಣಿಕರ್ಣಿಕಾ’ ಚಿತ್ರದ ಟ್ರೈಲರ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯುದ್ಧಭೂಮಿಯಲ್ಲಿ ಹೋರಾಡುತ್ತಿರುವ ಝಾನ್ಸಿ ರಾಣಿಯ ಆಕ್ರೋಶ ಅನಾವರಣವಾಗಿದೆ.

ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ಯುದ್ಧ ಮಾಡ್ತಿರುವ ಝಾನ್ಸಿ ಎರಡು ಕೈಗಳಲ್ಲಿ ಖಡ್ಗ ಹಿಡಿದು ಆರ್ಭಟಿಸಿದ್ದಾರೆ. ತಮ್ಮ ವಸ್ತ್ರದ ಮೇಲೆ ಶತ್ರುಗಳನ್ನ ಚೆಂಡಾಡಿ ವೈರಿಗಳ ರಕ್ತದಲ್ಲಿ ಝಾನ್ಸಿ ಮಿಂದೇಳುವ ದೃಶ್ಯಗಳು ಅದ್ಭುತವಾಗಿ ಮೂಡಿಬಂದಿವೆ.

ಕ್ರಿಶ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಝಾನ್ಸಿ ರಾಣಿಯ ದೇಶಭಕ್ತಿ, ಪರಾಕ್ರಮ, ಬ್ರಿಟಿಷರ ವಿರುದ್ಧ ದಂಗೆ ಹೀಗೆ ಪ್ರತಿಯೊಂದು ಅಂಶವನ್ನಿಟ್ಟು ತೆರೆಮೇಲೆ ತರುತ್ತಿದ್ದಾರೆ. ಇನ್ನುಳಿದಂತೆ ಅತುಲ್ ಕುಲಕರ್ಣಿ, ಸೋನುಸೂದ್ ಮತ್ತು ಅಂಕಿತಾ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಣಿಕರ್ಣಿಕಾ ಸಿನಿಮಾ ಜನವರಿ 25 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.