ಚಾಮರಾಜನಗರ: ಗ್ರಂಥಾಲಯದಲ್ಲಿ ಕೇವಲ ಇಷ್ಟೇ ಮ್ಯಾಗಜೀನ್ಗಳು ಬರುತ್ತವೆ, ಪಠ್ಯ ಪುಸ್ತಕಗಳು ಕೈಗೆ ಇನ್ನು ಸಿಕ್ಕಿಲ್ಲ ಎಂಬ ದೂರುಗಳು ಇನ್ನು ಮುಂದೆ ಬಂದ್ ಆಗಲಿದ್ದು ಗ್ರಂಥಾಲಯ ಇಲಾಖೆ ಡಿಜಿಟಲೀಕರಣದತ್ತ ದಾಪುಗಾಲು ಇಡುತ್ತಿದೆ
ಹೌದು, ಒಂದನೇ ತರಗತಿಯಿಂದ ಪಿಯುಸಿವರೆಗಿನ ಪುಸ್ತಕಗಳು, 100ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ನಿಯತಕಾಲಿಕೆಗಳು, ಕೆಪಿಎಸ್ಸಿ, ಐಎಎಸ್ ಕುರಿತ ಸ್ಪರ್ಧಾತ್ಮಕ ಪುಸ್ತಕಗಳು, 3 ವರ್ಷದ ಹಿಂದಿನ ಪ್ರಶ್ನೆಪತ್ರಿಕೆಗಳು ಒಳಗೊಂಡಂತೆ ಇತರೆ ಹೊತ್ತಿಗೆಗಳು ಡಿಜಿಟಲೀಕರಣಗೊಳಿಸಿ ಬೆರಳ ತುದಿಯಲ್ಲೆ ಎಲ್ಲಾ ಮಾಹಿತಿಯನ್ನು ಒದಗಿಸಲು ಗ್ರಂಥಾಲಯ ಇಲಾಖೆ ಸಜ್ಜಾಗಿದೆ.
ರಾಜ್ಯದಲ್ಲೇ ಮೊದಲ ಬಾರಿಗೆ ಜಿಲ್ಲೆಯ ಕೊಳ್ಳೇಗಾಲ ನಗರ ಗ್ರಂಥಾಲಯದ ಮೂಲಕ ಈ ಯೋಜನೆ ಜಾರಿಯಾಗುತ್ತಿದ್ದು ಮೂರು ಹಂತಗಳಲ್ಲಿ ರಾಜ್ಯದ ಎಲ್ಲಾ ನಗರ, ತಾಲೂಕು, ಗ್ರಾಪಂ ಹಾಗೂ ಬಿಬಿಎಂಪಿ ಗ್ರಂಥಾಲಯಗಳು ಈ ಡಿಜಿಟಲ್ ಸೌಲಭ್ಯವನ್ನು ಒದಗಿಸಲಿವೆ.
ಕೇರಳ ಮೂಲದ ಸಾಯಿ ಸಂಜೀವಿನಿ ಟ್ರಸ್ಟ್ ಎಂಬ ಸಂಸ್ಥೆಯ ಸಹಯೋಗದಲ್ಲಿ ಗ್ರಂಥಾಲಯ ಇಲಾಖೆಯು ಈ ಯೋಜನೆ ಹಮ್ಮಿಕೊಂಡಿದ್ದು, ಮೊಬೈಲ್ ಮೂಲಕವೇ 479 ಪುಸ್ತಕಗಳನ್ನು ಓದುಗ ಓದಬಹುದಾಗಿದೆ. ಇದರೊಂದಿಗೆ ಕೆಎಎಸ್, ಐಎಎಸ್, ನೀಟ್ ಪರೀಕ್ಷೆಗಳಿಗೆ ಮಾರ್ಗದರ್ಶಿಯಾಗಿ ಹಳೇ ಪ್ರಶ್ನೆಪತ್ರಿಕೆಗಳು, ಓದುವ ಸಾಮಾಗ್ರಿಗಳನ್ನು ಡಿಜಿಟಲ್ ಮೂಲಕ ಒದಗಿಸಲಿವೆ.
ಇ-ಗ್ರಂಥಾಲಯ ಎಂದು ಡೊಮೇನ್ ಹೆಸರಿಟಿದ್ದು ಆಯಾ ಗ್ರಂಥಾಲಯಗಳಲ್ಲಿ ಸದಸ್ಯತ್ವ ಪಡೆದರೆ ಒಂದು ಕೋಡ್ ನೀಡಲಿದ್ದೇವೆ, ಆ ಕೋಡ್ ಬಳಸಿ ಮೊಬೈಲ್ ಅಪ್ಲಿಕೇಷನ್ ಮೂಲಕ ಪ್ರಶ್ನೆಪತ್ರಿಕೆಗಳು, ಪುಸ್ತಕಗಳನ್ನು ಓದಬಹುದಾಗಿದೆ ಎಂದು ಇಲಾಖೆಯ ನಿರ್ದೇಶಕ ಸತೀಶ್ಕುಮಾರ್ ಹೊಸಮನಿ ತಿಳಿಸಿದ್ದಾರೆ.

ಉದ್ಯೋಗ ಆಕಾಂಕ್ಷಿಗಳು, ವಿದ್ಯಾರ್ಥಿಗಳಿಗೆ ಇನ್ನು ಬೆರಳ ತುದಿಯಲ್ಲೇ ಮಾಹಿತಿ!