ದೇವ ಕೊಟ್ಟಿಹ ಕೈ..
ದೇವನೇ ಬೇಡುತಿಹ..!

ತುತ್ತನಿತ್ತಿಹ ಕೈ..
ತುತ್ತು ಬೇಡುತ್ತಿಹುದು..
ಹೆತ್ತ ತಾಯಿಯನೊಮ್ಮೆ..
ನೆನಪು ಮಾಡಿ..
ಕಸದಿ ಚೆಲ್ಲುವ ಕೂಳ..
ಹಸಿದವಗೆ ಕೊಟ್ಟುಬಿಡಿ..
ಬೆನ್ನು ಹರಸಲಿ.. ಬಾಗಿ
ಅನ್ನತುಂಬಿ.
ಚಿಂದಿ ಅರಿವೆಯ ಒಳಗೆ..
ಚಿಂದಿ ಬದುಕನು ಹಿಡಿದು..
ಮಂದಿ ಮಂದೆಯ ಮುಂದೆ..
ಬಂದು ಕುಳಿತಿಹಳು..
ಎಷ್ಟು ಮಕ್ಕಳ ಹಡೆದು..
ಕಷ್ಟವುಂಡಿತೊ ಜೀವ..
ಬೃಷ್ಟ ಜಗವದ ಮರೆತು..
ಮಲಗಿಹುದು.
ಊರು ಗೋಲನು ನಂಬಿ…
ಊರೂರ ಅಲೆದಿಹಳು..
ಎಲ್ಲಿ ಊರುವಳೇನೋ..
ಹೆಸರಕಲ್ಲು..
ಬಿಳಿ ಮುಡಿಯನು ಹೊತ್ತು
ಕರಿಯ ಜಗವನು ಶಪಿಸಿ..
ಜರೆದಿಹಳು..ಜನುಮವನು..
ಬರಿಯ ನೆಲ್ಲು.
ಬಿಲ್ಲಿ..ಬಿಲ್ಲಿಯ ಕೂಡಿ..
ವಲ್ಲಿ ತುದಿಯಲಿ ಕಟ್ಟಿ..
ಸಲ್ಲಲೆನ್ನಯ ಕೊನೆಯ..
ಸೊಲ್ಲಿಗೆಂದು..
ದೇವ ಕೊಟ್ಟಿಹ ಕೈಲಿ..
ದೇವನೇ ಬೇಡುತಿಹ..
ದೇವ ನೀಡುವ ದೇವ..
ಜೀವಬಂಧು.
ಎಲ್ಲೊ ಸಾಗುವ ದಾರಿ..
ಎಲ್ಲೊ ಹೋಗುವ ಜನರು..
ಚೆಲ್ಲಿಬಿಡಿ ಚಿಲ್ಲರೆಯ..
ತಾಯಿಯೆದುರು..
ಬಾರೆಂದು ಬಾಯ್ತೆರೆದು..
ಬಾಯ್ತುಂಬ ಕರೆಯುವಳು..
ತಾಯಿ ಬದುಕಲಿ ಪಾಪ..
ಜೀವರೆದುರು..
ತಿಗಣೇಶ ಮಾಗೋಡು.
(9343596619)