ಮೊಬೈಲ್‍ನ ಅತಿ ಬಳಕೆಯಿಂದ ಸ್ನೇಹ ಸಂಬಂಧ ಮರೆಯಾಗುತ್ತಿದೆ: ಡಾ.ಸೌಮ್ಯ ಕೆ ವಿ

ಯಲ್ಲಾಪುರ: ಉತ್ತಮ ಹವ್ಯಾಸಗಳಲ್ಲಿ ನಮ್ಮನ್ನು ತೊಡಗಿಸಿಕೊಂಡಾಗ ಮಾತ್ರ ನಾವು ಮಾನಸಿಕವಾಗಿ ಸದೃಢವಾಗಲು ಸಾಧ್ಯ ಎಂದು ಡಾ.ಸೌಮ್ಯ ಕೆ. ವಿ. ಹೇಳಿದರು.
ಅವರು ಪಟ್ಟಣದ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಮ್ಮಿಕೊಂಡ ‘ವಾರ್ಷಿಕ ವಿಷೇಶ ಶಿಬಿರ’ ದ 2 ನೇ ದಿನದಲ್ಲಿ ಆರೋಗ್ಯ ಅರಿವು ಮತ್ತು ವಿಶ್ವ ದೃಷ್ಠಿ ದಿನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು. ದೇಹ ಚೆನ್ನಾಗಿದ್ದರೆ ಮನಸ್ಸು ಸದೃಢವಾಗಿರಲು ಸಾಧ್ಯ ಸಣ್ಣ ಸಣ್ಣ ವಿಷಯಗಳಿಗೂ ಇಂದು ತೀವ್ರವಾಗಿ ತೀಕ್ಣವಾಗಿ ಪ್ರತಿಕ್ರಿಯಿಸುತ್ತಾ ಖಿನ್ನತೆ ಹತಾಶೆಯಿಂದ ಬದುಕುವ ಪರಿಸ್ಥಿತಿಯನ್ನು ಯುವ ಜನಾಂಗ ತಾನೇ ಸೃಷ್ಠಿಸಿಕೊಳ್ಳುತ್ತಿದೆ. ತಂದೆ ತಾಯಿಯರ ವೈಯಕ್ತಿಕ ಜೀವನ ಮತ್ತು ಸಾಮಾಜಿಕ ವೈಪರಿತ್ಯಗಳು ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತಿದೆ. ಮೊಬೈಲ್‍ನ ಅತಿಯಾದ ಬಳಕೆಯಿಂದ ನಿಜವಾದ ಸಂಬಂಧ ನಿಜವಾದ ಸ್ನೇಹ ಹೊರಟುಹೋಗಿ ಮಿಥ್ಯಾ ಪ್ರಪಂಚ ಸೃಷ್ಟಿಯಾಗುತ್ತಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ. ದಾಕ್ಷಾಯಿಣಿ ಜಿ. ಹೆಗಡೆ ಇಂದಿನ ಮಕ್ಕಳು ಚಿಕ್ಕಂದಿನಿಂದಲೂ ತಂದೆ ತಾಯಿಗಳ ಮೇಲೆ ಅತಿಯಾಗಿ ಅವಲಂಬಿತರಾಗುತ್ತಾ ವೈಯಕ್ತಿಕವಾಗಿ ದುರ್ಬಲರಾಗುತ್ತಿದ್ದಾರೆ ಎಂದರು. ಮನ್ನೆಚ್ಚರಿಕೆಯೇ ಆರೋಗ್ಯ ಕುರಿತು ಡಾ. ಸ್ವಪ್ನಾ ಪಂಡಿತ ಉಪನ್ಯಾಸ ನೀಡಿದರು. ಉಪನ್ಯಾಸಕ ಶ್ರೀಪಾದ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಶ್ರುತಿ, ಸ್ಪೂರ್ತಿ ಸಂಗಡಿಗರು ಎನ್.ಎಸ್.ಎಸ್. ಗೀತೆ ಹಾಡಿದರು. ರಂಜಿತ ಸ್ವಾಗತಿಸಿದರು. ಎನ್.ಎಸ್.ಎಸ್. ಸಂಯೋಜಕ ಜಿ.ಎಚ್. ನಾಯಕ ಆಶಯ ಮಾತುಗಳನ್ನಾಡಿದರು.ಸಹನಾ ಗಾಂವ್ಕರ ಕಾರ್ಯಕ್ರಮ ನಿರ್ವಹಿಸಿದರು. ವಿನಯ ಭಟ್ಟ ವಂದಿಸಿದರು. ಮೆಮೊರಿ ಟೆಕ್ನಿಕ್ ಟ್ರೇನರ್ ಆದ ಕುಮಾರ ಯೋಗೇಶ ಶಾನಭಾಗ ಪ್ರಸ್ತುತ ಪಡಿಸಿದ ‘ನೆನಪಿನ ಶಕ್ತಿ ವೃದ್ಧಿ’ ಕುರಿತ ಕಾರ್ಯಕ್ರಮ ಶಿಬಿರಾರ್ಥಿಗಳನ್ನು ರಂಜಿಸಿತು.