ಬೆಂಗಳೂರು, – ಸ್ಯಾಂಡಲ್‍ವುಡ್‍ನಲ್ಲಿ ಮತ್ತೆ ಮೀ ಟೂ ಬಿರುಗಾಳಿ ರಾಡಿ ಎಬ್ಬಿಸಿದೆ. ಖ್ಯಾತ ಚಿತ್ರನಟಿ ಶೃತಿ ಹರಿಹರನ್ ಅವರು ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿದ ಮೀ ಟೂ ಆರೋಪ ಸ್ಯಾಂಡಲ್‍ವುಡ್‍ನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ. ಇದೀಗ ಮೀ ಟೂ ಬಿರುಗಾಳಿ ಕನ್ನಡ ಚಿತ್ರರಂಗದಲ್ಲಿ ರಾಡಿ ಎಬ್ಬಿಸುವ ಮುನ್ಸೂಚನೆ ನೀಡಿದೆ. ಯುವನಟಿಯೊಬ್ಬಳು ಖ್ಯಾತ ನಿರ್ದೇಶಕ ಶಿವಮಣಿ ಮತ್ತು ಆತನ ಮ್ಯಾನೇಜರ್ ಮಹೇಶ್ ಎಂಬುವರ ವಿರುದ್ಧ ಮೀ ಟೂ ಆರೋಪ ಮಾಡಿದ್ದಾರೆ.

ಇದರ ಬೆನ್ನಲ್ಲೇ ಯುವ ಗಾಯಕಿ ಶಿಲ್ಪಾ ಮಧುಸೂದನ್ ಅವರು ತಮ್ಮ ಎಫ್‍ಬಿ ಖಾತೆಯಲ್ಲಿ ಸ್ಯಾಂಡಲ್‍ವುಡ್‍ನಲ್ಲಿ ಆರಂಭಗೊಂಡಿರುವ ಮೀ ಟೂ ಚಳವಳಿ ಸಂಗೀತ ಲೋಕಕ್ಕೂ ಕಾಲಿಟ್ಟರೆ ಅದೆಷ್ಟೋ ಗಾಯಕರ ಮಾನ ಹರಾಜಾಗಬಹುದೋ ಎಂದು ಪ್ರಶ್ನಿಸುವ ಮೂಲಕ ಸಂಗೀತ ಲೋಕದಲ್ಲೂ ಲೈಂಗಿಕ ಕಿರುಕುಳ ನಡೆಯುತ್ತಿದೆ ಎಂಬ ಸುಳಿವು ನೀಡಿದ್ದಾರೆ.

ಮೂಲತಃ ಮುಂಬೈ ಬೆಡಗಿಯಾಗಿರುವ ಕೈರಾ ಎಂಬ ಯುವನಟಿ ಕನ್ನಡದ ಅಭಿರಾಮಿ ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.ಚಿತ್ರರಂಗದಲ್ಲಿ ನೆಲೆಯೂರಬೇಕು ಎಂದು ಕನಸು ಕಾಣುತ್ತಿದ್ದ ನನಗೆ ಖ್ಯಾತ ನಿರ್ದೇಶಕ ಶಿವಮಣಿ ಅವರ ಶಿಷ್ಯ ಎಂದು ಹೇಳಿಕೊಂಡ ಮಹೇಶ್ ಎಂಬಾತ ಕರೆ ಮಾಡಿ ನಿನಗೆ ಶಿವಮಣಿ ಅವರ ಚಿತ್ರದಲ್ಲಿ ನಟಿಸಲು ಅವಕಾಶ ಕೊಡಿಸುತ್ತೇನೆ ಎಂದು ಭರವಸೆ ನೀಡಿದ್ದ.

ಆತನ ಮಾತನ್ನು ನಂಬಿದ ನನ್ನನ್ನು ಖಾಸಗಿ ಹೊಟೇಲ್‍ವೊಂದಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ಕಿರುಕುಳ ನೀಡಲು ಮುಂದಾದ. ಆತನ ವರ್ತನೆಯಿಂದ ಬೇಸತ್ತು ಉಪಾಯ ಮಾಡಿ ತಪ್ಪಿಸಿಕೊಂಡು ಬಂದೆ. ಇಂತಹ ವ್ಯಕ್ತಿಗಳಿಂದ ದೂರವಿರುವುದು ಒಳಿತು ಎಂದು ಕೈರಾ ತನ್ನ ಫೇಸ್‍ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈಗಾಗಲೇ ಶೃತಿ ಆರೋಪದಿಂದ ನಲುಗಿ ಹೋಗಿರುವ ಸ್ಯಾಂಡಲ್‍ವುಡ್ ಕೈರಾ ಅವರ ಆರೋಪದಿಂದ ತತ್ತರಿಸಿಹೋಗಿದೆ.

ಕೈರಾ ಆರೋಪ ಕುರಿತಂತೆ ಪ್ರತಿಕ್ರಿಯಿಸಿರುವ ನಿರ್ದೇಶಕ ಶಿವಮಣಿ, ನನಗೆ ಕೈರಾ ಯಾರು ಎಂದೇ ಗೊತ್ತಿಲ್ಲ. ಚಿತ್ರ ನಿರ್ದೇಶನ ಬಿಟ್ಟು ಐದು ವರ್ಷಗಳಾಗಿವೆ. ಈಗ ನನ್ನ ವಿರುದ್ಧ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶೃತಿ ಹರಿಹರನ್, ಸಂಜನಾ, ಕೈರಾ ಮೀ ಟೂ ಆರೋಪದ ಬೆನ್ನಲ್ಲೇ ಯುವ ಗಾಯಕಿ ಶಿಲ್ಪಾ ಮಧುಸೂದನ್ ಅವರ ಫೇಸ್‍ಬುಕ್ ಪೋಸ್ಟ್ ಸಂಗೀತ ಲೋಕದಲ್ಲೂ ಲೈಂಗಿಕ ಕಿರುಕುಳ ನಡೆಯುತ್ತಿದೆ ಎಂಬುದಕ್ಕೆ ಪುಷ್ಟಿ ನೀಡುವಂತಿದೆ.

ಶಿಲ್ಪಾ ಅವರು ಇಷ್ಟು ವರ್ಷ ಮ್ಯೂಸಿಕ್ ಫೀಲ್ಡ್‍ನಲ್ಲಿ ಆಗಿರುವ ಎಕ್ಸ್‍ಪೀರಿಯನ್ಸ್‍ಗಳನ್ನು ಮೀ ಟೂ ಅಭಿಯಾನ ಅಂತ ಹೆಸರುಗಳು ಹಾಕಿದ್ರೆ ಅದೆಷ್ಟು ಜನ ಮೀಡಿಯಾ ಪಾಲಾಗ್ಬೇಕೋ, ಏನ್ ಕಥೆನೋ ಎಂದು ಬರೆದುಕೊಂಡಿದ್ದಾರೆ. ಶಿಲ್ಪಾ ಮಧುಸೂದನ್ ಅವರ ಈ ಪೋಸ್ಟ್ ಸಂಗೀತ ಲೋಕವನ್ನು ಬೆಚ್ಚಿಬೀಳಿಸಿರುವುದಂತೂ ಸತ್ಯ.