ಗೆಳೆಯನ ಹತ್ಯೆಗೆ ಸುಪಾರಿ: ಒಂದು ವಾರದಿಂದ ನಾಪತ್ತೆಯಾಗಿದ್ದ ಪ್ರೇಮಕುಮಾರ್ ಮೃತದೇಹ ಪತ್ತೆ

ಕಾರವಾರ: ಕಳೆದ ವಾರ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಉಳವಿಯಲ್ಲಿನ ಆಕಳಗವಿ ಎನ್ನುವ ದಟ್ಟ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಕಾರವಾರದ ಬೈತಖೋಲ್ ನಿವಾಸಿಯಾಗಿದ್ದ ಪ್ರೇಮಕುಮಾರ್ ನಾಯರ್ ಹತ್ಯೆಗೊಳಗಾದ ವ್ಯಕ್ತಿ. ಇತನ ಸ್ನೇಹಿತ ರಿಜ್ವಾನ್ ಎನ್ನುವಾತನೇ ಇಬ್ಬರಿಗೆ ಸುಪಾರಿ ನೀಡಿ ಹತ್ಯೆ ಮಾಡಿಸಿದ್ದಾನೆ ಎಂದು ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ. ಅಲ್ಲದೆ ಸುಪಾರಿ ಪಡೆದ ಮುಸ್ತಾಕ್ ಹಾಗೂ ಶಫಿ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ರಿಜ್ವಾನ್ ತಲೆಮರಿಸಿಕೊಂಡಿದ್ದು ಪತ್ತೆಗೆ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಪ್ರೇಮಕುಮಾರ್ ಹಾಗೂ ರಿಜ್ವಾನ್ ಇಬ್ಬರು ಹಳೆ ಸ್ನೇಹಿತರು. ಆದರೆ ಇತ್ತಿಚೇಗೆ ಡಾಂಬರು ಶಿಪ್ಪಿಂಗ್ ವ್ಯವಹಾರದಲ್ಲಿ ಇಬ್ಬರಲ್ಲಿ ವೈಮನಸ್ಸು ಹುಟ್ಟಿಕೊಂಡಿದ್ದು. ಇಬ್ಬರಲ್ಲಿದ್ದ ಕಲಹದಿಂದಾಗಿ ರಿಜ್ವಾನ್, ನಾಯರ್ ಹತ್ಯೆಗೆ ಸಂಚು ರೂಪಿಸಿ ಶಫಿ ಹಾಗೂ ಮುಸ್ತಾಕ್ ಎನ್ನುವವರಿಗೆ ಸುಪಾರಿ ನೀಡಿದ್ದ.
ಉಳವಿಯ ಆಳಗವಿಯ ಎನ್ನುವ ಅರಣ್ಯ ಪ್ರದೇಶದಲ್ಲಿ ಗಾಂಜಾ ಬೆಳೆದಿದ್ದೇವೆ. ಅಲ್ಲದೆ ಉತ್ತಮ ಕಟ್ಟಿಗೆಯೂ ಇದೆ ಎಂದು ನಾಯರ್ನಿಗೆ ಸುಳ್ಳು ಹೇಳಿ ಕರೆದುಕೊಂಡು ತೆರಳಿದ್ದಾನೆ. 15 ರಂದುಸ್ನೇಹಿತನ ಜೊತೆಗೆ ಕದ್ರಾಕ್ಕೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ತೆರಳಿದ್ದ ಪ್ರೇಮಕುಮಾರ್ ನಿಗೆ ರಿಜ್ವಾನ್ ಜೋಯಿಡಾದ ಉಳಿವಿಗೆ ಕರೆಸಿಕೊಂಡಿದ್ದ.
ಸ್ಥಳಕ್ಕೆ ತೆರಳುವ ಸಂದರ್ಭದಲ್ಲಿ ನಾಯರ್ ಕಣ್ಣಿಗೆ ಕಪ್ಪು ಪಟ್ಟಿ ಕಟ್ಟಿ ಕರೆದುಕೊಂಡು ಹೋಗುತ್ತಿದ್ದಾಗ ಶಫಿ, ಮುಸ್ತಾಕ್ ಹಾಗೂ ರಿಜ್ವಾನ್ ಸೇರಿ ಕತ್ತಿಯಿಂದ ಕುತ್ತಿಗೆ, ಎದೆ, ಬೆನ್ನಿಗೆ ಹಲ್ಲೆ ಮಾಡಿಕೊಲೆ ಮಾಡಿದ್ದಾರೆ. ಬಳಿಕ ಆತನ ಬಟ್ಟೆ, ಬೂಟುಗಳನ್ನು ತೆಗೆದು ಸೂಪಾ ಜಲಾಶಯದಲ್ಲಿ ಎಸೆದಿದ್ದಾರೆ. ಪೊಲೀಸರು ಶಫಿ ಹಾಗೂ ಮುಸ್ತಾಕ್ ಎನ್ನುವ ಆರೋಪಿಗಳನ್ನು ಬಂಧಿಸಿದ್ದಾರೆ. ರಿಜ್ವಾನ್ ತಲೆಮರೆಸಿಕೊಂಡಿದ್ದಾನೆ.
ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಗಳ ಜೊತೆ ಸೇರಿ ಪ್ರೇಮಕುಮಾರನನ್ನು ಹತ್ಯೆ ಮಾಡಲಾಗಿರುವ ಉಳವಿಯ ಆಕಳಗವಿ ಅರಣ್ಯ ಪ್ರದೇಶಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈಸಂದರ್ಭದಲ್ಲಿ ಆರೋಪಿಗಳು ಯಾವ ರೀತಿ ಹತ್ಯೆ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ತನಿಖೆ ಮುಂದುವರಿದಿದೆ