ಇನ್ನು ಮುಂದೆ ಗೋವಾ ಮಾರುಕಟ್ಟೆಯಲ್ಲಿ ಮೀನು ಮಾರಾಟಕ್ಕೆ ಸರಕಾರದಿಂದ ಸೂಕ್ತ ಪರವಾನಗಿ ಅಗತ್ಯ

ಕಾರವಾರ: ಆಹಾರ ಮತ್ತು ಔಷಧ ಮಂಡಳಿಯು ಗೋವಾ ರಾಜ್ಯದಲ್ಲಿ ಸಗಟು ಮೀನು ಮಾರುಕಟ್ಟೆ ವ್ಯಾಪಾರ ಮಾಡಲು ಸೂಕ್ತ ದಾಖಲೆಗಳನ್ನು ಹೊಂದಿರದ ಮೀನು ಸಾಗಾಟ ಮಾಡುವ ಲಾರಿಗಳನ್ನು ಕರ್ನಾಟಕದ ಗಡಿಯಲ್ಲಿ‌‌ ತಡೆದಿದ್ದರಿಂದ ಕರ್ನಾಟಕ- ಗೋವಾ ಗಡಿಯಲ್ಲಿ ಲಾರಿ ಚಾಲಕರು ತಡ ರಾತ್ರಿ ಪ್ರತಿಭಟನೆ ನಡೆಸಿದರು.
ಕಳೆದ‌ ಅನೇಕ‌ ದಿನಗಳಿಂದ ಗೋವಾ ಕರ್ನಾಟಕ ಹಾಗೂ ಇತರ ರಾಜ್ಯಗಳಿಂದ ಆಮದು ಮಾಡಿಕೊಳ್ಳುವ ಮೀನುಗಳಿಗೆ ಅಪಾಯಕಾರಿ ಫಾರ್ಮಾಲಿನ್ ಬಳಕೆ ಮಾಡಿರುವ ಮೀನುಗಳನ್ನು ನಿಷೇಧ ಹೇರಲಾಗಿತ್ತು. ಈ ಸಂಬಂಧ ಮೀನಿನ ಆಮದಿಗೆ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದೆ. ಗೋವಾದಲ್ಲಿ ಪುರಸಭೆಯ ಪರವಾನಗಿ ಪಡೆಯದೆ ಇರುವ 33 ಮೀನು ವ್ಯಾಪಾರಿಗಳ ನೋಂದಣಿಯನ್ನು ಎಫ್’ಡಿಎ ರದ್ದುಗೊಳಿಸಿದೆ. ಇತ್ತೀಚಿಗೆ ಎಫ್’ಡಿಎದಿಂದ ನೋಂದಣಿ ಮಾಡಿಕೊಳ್ಳದವರೂ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮೀನು ವ್ಯಾಪಾರ ನಡೆಸುತ್ತಿದ್ದರು ಎನ್ನುವ ಆರೋಪವಿದೆ. ಬೇರೆ ರಾಜ್ಯಗಳಿಂದ ಗೋವಾಕ್ಕೆ ತೆರಳುವ ಮೀನು ಲಾರಿಗಳ ಪ್ರವೇಶ ನಿಷೇಧಿಸಲಾಗಿದೆ.
ತಮಿಳುನಾಡು, ಕೇರಳ ಹಾಗೂ ಮಂಗಳೂರು ಭಾಗಗಳಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾರವಾರ ಮೂಲಕ ಈ ಲಾರಿಗಳು ನಿತ್ಯ ಗೋವಾಕ್ಕೆ ತೆರಳುತ್ತಿದ್ದವು. ಈ ಮೀನು‌ ಮಾರಾಟಗಾರರು ಇನ್ನು ಮುಂದೆ ಗೋವಾ ಮಾರುಕಟ್ಟೆಯಲ್ಲಿ ಮೀನು ಮಾರಾಟ ಮಾಡಬೇಕು‌ ಎಂದರೆ ಗೋವಾ‌ ಸರಕಾರದಿಂದ ಸೂಕ್ತ ಪರವಾನಗಿ ಪಡೆಯುವುದು ಅನಿವಾರ್ಯವಾಗಿದೆ.
ಕರ್ನಾಟಕ ರಾಜ್ಯದ ಲಾರಿಗಳನ್ನು ಗುರಿಯಾಗಿಸಿಕೊಂಡು ಗೋವಾದ‌ ಪೋಳೆಂ ಗೇಟ್ ಬಳಿ ತಡೆದು ತೊಂದರೆ ನೀಡುತ್ತಿದ್ದಾರೆ ಎಂದು ಮೀನು ಲಾರಿಗಳ ಚಾಲಕರು ಆಕ್ರೋಶ ವ್ಯಕ್ತಪಡಿಸಿದರು. ಮೀನು ಲಾರಿಗಳು ರಾತ್ರಿ 8 ಗಂಟೆ ನಂತರ ಗೋವಾ ಪ್ರವೇಶಿಸಲು ಅವಕಾಶವಿಲ್ಲ. ಮೀನಿನ ತಪಾಸಣೆ ನಡೆಸುವ ಆಹಾರ ಮತ್ತು ಔಷಧ ಮಂಡಳಿಯ ಅಧಿಕಾರಿಗಳು ಬಂದು ಎನ್ಓಸಿ ನೀಡುವವರೆಗೆ ಗೋವಾಕ್ಕೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.