ವಿನಾಯಕ ಭಟ್

adike narayan temple bhatkalಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ದ ನಗರ, ಮಿನಿ ದುಬೈ ಎಂದೇ ಖ್ಯಾತಿ ಹೊಂದಿರುವ ಭಟ್ಕಳದಲ್ಲಿ ಗತವೈಭವದ ಸ್ಮಾರಕಗಳಿದ್ದು ಅಧಿಕಾರಿಗಳ ಕಡೆಗಣನೆಗೆ ತುತ್ತಾಗಿವೆ. ೧೫ನೇ ಶತಮಾನದ ಶಿಲಾ ದೇವಾಲಯಗಳು ಜೀರ್ಣಾವಸ್ಥೆಯಲ್ಲಿದ್ದರೂ ಅವುಗಳು ಅಭಿವೃದ್ದಿಯಾಗದೇ ನಶಿಸಿಹೋಗುವ ಭೀತಿಯಲ್ಲಿದ್ದು ಇಲಾಖೆಯವರು ಈ ಕುರಿತು ಚಿಂತಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಕುರಿತ ಒಂದು ಸಮಗ್ರ ವರದಿ ಇಲ್ಲಿದೆ
ಶತಶತಮಾನಗಳಿಂದ ಬಿಸಿಲು ಮಳೆಗೆ ಮೈ ತೆರೆದು ನಿಂತಿರುವ ಭಟ್ಕಳದ ೫೦೦ ವರ್ಷಗಳ ಹಿಂದಿನ ದೇವಾಲಯಗಳು ಆಗಿನ ಶ್ರೀಮಂತಿಕೆ, ದೈವಭಕ್ತಿ, ಕಲಾಪ್ರೇಮಕ್ಕೆ, ಈಗಲೂ ಸಾಕ್ಷಿಯಾಗಿ ನಿಂತಿವೆ. ಪೂರ್ತಿ ಶಿಲಾಮಯವಾದ ಮೂಡುಭಟ್ಕಳದ ಆರರಿಂದ ಎಂಟು ದೇವಾಲಯಗಳು ಜೀರ್ಣಾವಸ್ಥೆಯಲ್ಲಿಯೂ ಭಟ್ಕಳದ ನಿಜವಾದ ಸಂಪತ್ತು ಎಂದರೂ ತಪ್ಪಾಗಲಾರದು. ಪೂರ್ತಿ ಶಿಲೆಯಲ್ಲಿಯೇ ನಿರ್ಮಿಸಿದ ನಾರಾಯಣ ದೇವಸ್ಥಾನದ ಗರ್ಭಗುಡಿಯ ಹೊರಮೈಯಲ್ಲಿ ರಾಮಾಯಣದ ಕಥೆ ಹೇಳುವ ಸಾವಿರಾರು ಚಿತ್ರಗಳನ್ನು ಕೆತ್ತಲಾಗಿದೆ. ಒಳಾವರಣದಲ್ಲಿ ಮಹಾಭಾರತದ ಕಥೆ ಹೇಳುವ ಚಿತ್ರಗಳಿವೆ. ಅರ್ಧ ಕುಸಿದು ಹೋದ ಚಂದ್ರಶಾಲೆಯ ಪೌಳಿಯ ಮೇಲೆಲ್ಲಾ ಯುದ್ಧದ ದೃಶ್ಯಗಳನ್ನು, ಪ್ರಾಣಿಗಳ ಸೆಣಸಾಟವನ್ನು ಕೆತ್ತಲಾಗಿದೆ. ಗಾರೆಯನ್ನು ಬಳಸದೇ ಕಪ್ಪು ಶಿಲೆಯಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ ಎನ್ನುವುದು ವಿಶೇಷ. ಶಾಂತಪ್ಪ ನಾಯಕ ತಿರುಮಲ ದೇವಸ್ಥಾನ, ಅಡಿಕೆ ನಾರಾಯಣ ದೇವಸ್ಥಾನ, ಲಕ್ಕರಸ ಲಕ್ಷ್ಮೀ ನಾರಾಯಣ ದೇವಸ್ಥಾನ, ಲಕ್ಷ್ಮೀ ನರಸಿಂಹ ದೇವಸ್ಥಾನ ಹೀಗೆ ಹಲವು ದೇವಳಗಳಿದ್ದು ಕೆಲವೊಂದರ ಛಾವಣಿ ಕುಸಿದಿದ್ದರೆ, ಇನ್ನೂ ಕೆಲವೆಡೆ ಚಂದ್ರಶಾಲೆಯೂ ಕುಸಿದುಹೋಗಿದೆ. ದೇವಾಲಯದ ಒಳ ಪ್ರವೇಶಿಸಿದರೆ ಅಲ್ಲಿನ ಕೆತ್ತನೆಗಳನ್ನು ನೋಡುತ್ತಾ ಅಲ್ಲಿಂದ ಹೊರಬರೋಕೆ ಮನಸೇ ಒಪ್ಪೋದಿಲ್ಲ.
ಚಿತ್ರಗಳಲ್ಲಿ ಕೌಟುಂಬಿಕವಾಗಿ ಸತಿ-ಪತಿಗಳ ಮುನಿಸು, ನೀರನ್ನು ತಲೆಯ ಮೇಲೆ ಕೊಡದಲ್ಲಿ ತರುತ್ತಿರುವ ನಾರಿಯ ಕಂಕುಳಲ್ಲಿ ಪುಟ್ಟ ಕಂದ, ಬಿಲ್ಲುಧಾರಿ ನಾರಿಯು ರಥದಲ್ಲಿ ಕುಳಿತಿರುವುದು, ಗಂಡು ಹೆಣ್ಣಿನ ಪ್ರಣಯ ಕ್ರೀಡೆಗಳನ್ನು ತೋರಿಸುವ ಅದ್ಭುತ ಕಲಾಕೃತಿಗಳು, ಗಂಡು-ಹೆಣ್ಣು ವಿಶಿಷ್ಠ ಭಂಗಿಯಲ್ಲಿ ಚುಂಬಿಸುವ ದೃಶ್ಯಗಳು ಕಲಾಕಾರನ ಪ್ರಣಯ ವಿಲಾಸಪ್ರಿಯತೆಗೆ ಸಾಕ್ಷಿಯಂತಿವೆ. ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲೇ ಇರುವ ಈ ಸಂಸ್ಕೃತಿಯನ್ನು ಬಿಂಬಿಸುವ ಪುರಾತನ ದೇವಾಲಯಗಳಿದ್ದು ಇನ್ನು ಕೆಲವರ್ಷಗಳಲ್ಲಿ ನಶಿಸಿಹೋಗುವ ಅಪಾಯವಿದೆ ಎಂದರೆ ಅತಿಶಯೋಕ್ತಿಯಲ್ಲ. ಕಾರಣ ಇವುಗಳನ್ನು ಅಭಿವೃದ್ಧಿ ಪಡಿಸುವತ್ತ ಯಾವುದೇ ಇಲಾಖೆಯವರು ಗಮನವನ್ನೇ ನೀಡುತ್ತಿಲ್ಲ, ಹಾಗೂ ಅಗತ್ಯವಿರುವ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸುತ್ತಿಲ್ಲ.
ಖೇತಪೈ ನಾರಾಯಣ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ವೆಂಕಟೇಶ ನಾಯ್ಕ ಮಾತನಾಡಿ ಇಲ್ಲಿನ ದೇವಾಲಯಗಳನ್ನು ಇಲಾಖೆಯವರು ಅಭಿವೃದ್ಧಿ ಹೊಂದುವಂತೆ ಮಾಡಿ ಜನಾಕರ್ಷಣೆಯ ಪ್ರವಾಸಿ ಕೇಂದ್ರವನ್ನಾಗಿ ಮಾಡಬೇಕು ಎಂದರು. ಕೋಟಿ ಕೊಟ್ಟರೂ ಮತ್ತೆ ಕಟ್ಟಲಾಗದ ಇಂತಹ ದೇವಾಲಯಗಳು ಅವನತಿ ಹೊಂದಲು ಅವಕಾಶ ನೀಡದೇ ಇವುಗಳ ಅಭಿವೃದ್ಧಿಯತ್ತ ಸಂಬಂಧಿಸಿದ ಅಧಿಕಾರಿಗಳು ಲಕ್ಷ್ಯ ನೀಡಬೇಕಿದೆ. ಇದೊಂದು ಪ್ರವಾಸಿ ತಾಣವಾಗುವ ಎಲ್ಲಾ ಸಾಧ್ಯತೆಗಳಿದ್ದು ಪ್ರವಾಸೋದ್ಯಮ ಇಲಾಖೆಯವರು ಇತ್ತ ಕಡೆ ತಮ್ಮ ಚಿತ್ತವನ್ನು ಹರಿಸಬೇಕಿದೆ.